ಸಂಗ್ರೂರ್ (ಪಂಬಾಬ್): ಸಂಗ್ರೂರಿನ ಗಬ್ಡಾದಲ್ಲಿರುವ ಮೆರಿಟೋರಿಯಸ್ ಶಾಲೆಯ ವಸತಿ ನಿಲಯದಲ್ಲಿ ಮಕ್ಕಳಿಗೆ ಕಳಪೆ ಆಹಾರವನ್ನು ನೀಡಿರುವ ಆರೋಪ ಕೇಳಿಬಂದಿದೆ. ಸುಮಾರು 35ಕ್ಕೂ ಹೆಚ್ಚು ಮಕ್ಕಳು ಈ ಆಹಾರವನ್ನು ಸೇವನೆ ಮಾಡಿ ಅಸ್ವಸ್ಥರಾಗಿದ್ದಾರೆ. ಮಕ್ಕಳ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ, ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯನ್ನು ಖಂಡಿಸಿ ಅಸ್ವಸ್ಥಗೊಂಡ ಮಕ್ಕಳ ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ. ದೀಪಾವಳಿ ಹಬ್ಬದಿಂದ ಈವರೆಗೆ ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ. ಈ ಬಗ್ಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾರು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಮಕ್ಕಳ ಪೋಷಕರು ಆರೋಪಿಸಿದ್ದಾರೆ.
ಮಕ್ಕಳ ಪೋಷಕರು ಆಕ್ರೋಶ: ''ಸರ್ಕಾರದಿಂದ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡುವುದು ಒಳ್ಳೆಯದು. ಆದ್ರೆ, ಅವರಿಗೆ ಯಾವ ರೀತಿಯ ಆಹಾರವನ್ನು ನೀಡಲಾಗುತ್ತದೆ ಎಂಬುದರ ಬಗ್ಗೆ ಗಮನ ಹರಿಸುತ್ತಿಲ್ಲ. ಸಂಗ್ರೂರಿನ ಮೆರಿಟೋರಿಯಸ್ ಶಾಲೆಯಲ್ಲಿ ಕಳಪೆ ಗುಣಮಟ್ಟದ ಊಟ ವಿತರಣೆ ಮಾಡಿರುವುದು ಸರಿಯಲ್ಲ. ಅದೇ ಆಹಾರವನ್ನು ಸವಿದ 35ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಅವರನ್ನು ಸಂಗ್ರೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಶಾಲಾ ಆಡಳಿತ ಮಂಡಳಿ ಕ್ರಮ ಕೈಗೊಳ್ಳಬೇಕು'' ಎಂದು ಸರ್ಕಾರಿ ಆಸ್ಪತ್ರೆಗೆ ದಾಖಲಾದ ಮಕ್ಕಳ ಪೋಷಕರು ಒತ್ತಾಯಿಸಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಮಕ್ಕಳು ಅಸ್ವಸ್ಥ: ''ನಮಗೆ ಸರಿಯಾದ ಆಹಾರ ನೀಡಿಲ್ಲ. ಇದರಿಂದ ನಾವು ಅನಾರೋಗ್ಯಕ್ಕೆ ಒಳಗಾಗುತ್ತಿದ್ದೇವೆ. ಈ ಬಗ್ಗೆ ಹಲವು ಬಾರಿ ಶಾಲಾ ಆಡಳಿತದ ಗಮನಕ್ಕೆ ತಂದಿದ್ದೇವೆ. ನಮಗೆ ಇಂದು ಬೆಳಗ್ಗೆ ವಾಂತಿಬೇದಿ ಕಾಣಿಸಿಕೊಂಡಿದ್ದು, ಸಂಗ್ರೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಕ್ಕಳು ಹೇಳಿದರು. ಮಕ್ಕಳ ಪೋಷಕರನ್ನು ಮಾತನಾಡಿಸಿದಾಗ ಪಾಲಕರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಮಕ್ಕಳಿಗೆ ಕೆಟ್ಟ ಆಹಾರ ನೀಡಲಾಗುತ್ತಿದ್ದು, ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಕಳೆದ ನಾಲ್ಕು ದಿನಗಳಿಂದ ನಮ್ಮ ಮಕ್ಕಳು ಅಸ್ವಸ್ಥರಾಗಿದ್ದಾರೆ. ಆದ್ರೆ ನಮಗೆ ಮಾಹಿತಿ ನೀಡಿಲ್ಲ'' ಎಂದು ತಿಳಿಸಿದರು.
ಸಂಗ್ರೂರ್ ಎಸ್‌ಎಂಒ ವೈದ್ಯ ಕಿರ್ಪಾಲ್ ಪ್ರತಿಕ್ರಿಯೆ: ''ಇಂದು ನಮ್ಮ ಮಕ್ಕಳು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಭದ್ರತಾ ಪ್ರಭಾರ ಅಧಿಕಾರಿಯಿಂದ ನಮಗೆ ಕರೆ ಬಂದಿತ್ತು. ಫುಡ್ ಪಾಯಿಸನ್ ಆಗಿರುವುದರಿಂದ ಮಕ್ಕಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡಿದೆ. ಅವರಿಗೆ ಸೂಕ್ತ ಚಿಕಿತ್ಸೆ ನೀಡಿದ್ದೇವೆ ಎಂದು ಸಂಗ್ರೂರ್ ಎಸ್‌ಎಂಒ ವೈದ್ಯ ಕಿರ್ಪಾಲ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅರಿಶಿಣ ನಡುವೆ ಗಾಂಜಾ ಫಸಲು: ಅಪ್ಪ-ಮಗನ ಬಂಧನ