ರುದ್ರಪ್ರಯಾಗ(ಉತ್ತರಾಖಂಡ): ಮೇ 3 ರಿಂದ ಆರಂಭವಾಗಿರುವ ವಿಶ್ವವಿಖ್ಯಾತ ಚಾರ್ಧಾಮ್ ಯಾತ್ರೆಗೆ ಈ ಬಾರಿ ದಾಖಲೆ ಪ್ರಮಾಣದ ಭಕ್ತರು ಆಗಮಿಸಿದ್ದಾರೆ. ಯಾತ್ರೆ ಆರಂಭವಾದ ಒಂದು ತಿಂಗಳಲ್ಲೇ 18 ಲಕ್ಷ ಯಾತ್ರಿಕರು ಆಗಮಿಸಿದ್ದಾರೆ. ಇದು ಸಾರ್ವಕಾಲಿಕವಾಗಿ ದಾಖಲೆಯಾಗಿದೆ.
ಚಾರ್ಧಾಮ್ ಯಾತ್ರೆಗೆ ಇಲ್ಲಿಯವರೆಗೆ 18 ಲಕ್ಷದ 49 ಸಾವಿರದ 308 ಭಕ್ತರು ಭೇಟಿ ನೀಡಿದ್ದಾರೆ. ಇದರಲ್ಲಿ ಬದರಿನಾಥ ಧಾಮವನ್ನು ತಲುಪಿದ ಭಕ್ತರ ಸಂಖ್ಯೆ 7 ಲಕ್ಷ 66 ಸಾವಿರದ 542. ಇಷ್ಟು ಪ್ರಮಾಣದ ಭಕ್ತರು ಬದರಿನಾಥನ ದರ್ಶನವನ್ನು ಪಡೆದಿದ್ದಾರೆ.
2019 ರಲ್ಲಿ ಕೊರೊನಾಗೂ ಮುನ್ನ 6 ತಿಂಗಳ ಯಾತ್ರೆಯಲ್ಲಿ 10 ಲಕ್ಷ ಭಕ್ತರು ಮಾತ್ರ ಭೇಟಿ ನೀಡಿದ್ದರು. ಆದರೆ, ಈ ಬಾರಿ ಅದು 18 ಲಕ್ಷ ದಾಟಿದೆ. ಇದರಲ್ಲಿ ಕೇದಾರನಾಥಕ್ಕೆ 5 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿದ್ದಾರೆ. ಇನ್ನೂ 10 ಲಕ್ಷ ಜನರು ಕೇದಾರನಾಥನ ದರ್ಶನಕ್ಕೆ ಬರಲಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ಯಾತ್ರೆ ಇನ್ನೂ 5 ತಿಂಗಳು ನಡೆಯಲಿದೆ.
ಯಾವ ಕ್ಷೇತ್ರಕ್ಕೆ ಎಷ್ಟು ಭಕ್ತರು?: ಕೇದಾರನಾಥಕ್ಕೆ ಮೇ 6 ರಿಂದ 5,48,888 ಯಾತ್ರಿಕರು ಭೇಟಿ ನೀಡಿದ್ದಾರೆ. ಇನ್ನೂ 22,410 ಭಕ್ತರು ದರ್ಶನಕ್ಕೆ ಕಾದಿದ್ದಾರೆ. ಮತ್ತೊಂದೆಡೆ, ಮೇ 8 ರಿಂದ ಬದರಿನಾಥ ಧಾಮಕ್ಕೆ ಎರಡೂ ಕ್ಷೇತ್ರಗಳಿಗೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆ 13,15,430 ತಲುಪಲಿದೆ. ಇನ್ನು ಗಂಗೋತ್ರಿಗೆ ಇಲ್ಲಿಯವರೆಗೆ 3,05,179 ಯಾತ್ರಿಕರು ಬಂದರೆ, 2,28,699 ಭಕ್ತರು ಯಮುನೋತ್ರಿ ಧಾಮಕ್ಕೆ ಭೇಟಿ ನೀಡಿದ್ದಾರೆ.
ಯಾತ್ರೆಗೆ ನೋಂದಣಿ ಕಡ್ಡಾಯ: ಚಾರ್ಧಾಮ್ ಯಾತ್ರೆಗೆ ದಾಖಲೆಯ ಪ್ರಮಾಣದಲ್ಲಿ ಯಾತ್ರಿಕರು ಬರುತ್ತಿರುವ ಹಿನ್ನೆಲೆಯಲ್ಲಿ ಭಕ್ತರನ್ನು ನಿಯಂತ್ರಿಸುವ ಸಲುವಾಗಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯ ಮಾಡಲಾಗಿದೆ.
ಹೀಗಾಗಿ ಪೊಲೀಸರು ಪ್ರಯಾಣದ ಮಾರ್ಗಗಳಲ್ಲಿ ನಿರ್ಮಿಸಲಾದ ಚೆಕ್ಪೋಸ್ಟ್ಗಳಲ್ಲಿ ಪ್ರಯಾಣಿಕರ ನೋಂದಣಿ ಪರಿಶೀಲನಾ ಕಾರ್ಯ ನಡೆಸಲಾಗುತ್ತಿದೆ. ಈ ವೇಳೆ, ನೋಂದಣಿ ಮಾಡದವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಯಾತ್ರೆಗೆ ತೆರಳಲು ಬಯಸುವವರು ಈ ವೆಬ್‌ಸೈಟ್ https://registrationandtouristcare.uk.gov.in ನಲ್ಲಿ ನೋಂದಾಯಿಸಿಕೊಳ್ಳಬಹುದು.