ನವದೆಹಲಿ: 2020ರ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 3,66,138 ರಸ್ತೆ ಅಪಘಾತಗಳು ನಡೆದಿದ್ದು, ಇದರಲ್ಲಿ 3,48,279 ಜನರು ಗಾಯಗೊಂಡಿದ್ದು, 1,31,714 ಜನರು ಸಾವನ್ನಪ್ಪಿದ್ದಾರೆಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಉತ್ತರಿಸಿದ್ದಾರೆ.
ಲಿಖಿತ ರೂಪದಲ್ಲಿ ಉತ್ತರ ನೀಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ 2019ರಲ್ಲಿ 4,51,361 ಜನರು ರಸ್ತೆ ಅಪಘಾತಗಳಲ್ಲಿ ಗಾಯಗೊಂಡಿದ್ದು, ಒಟ್ಟು ಅಪಘಾತಗಳ ಸಂಖ್ಯೆ 4,49,002 ಆಗಿದೆ ಎಂದು ತಿಳಿಸಿದ್ದಾರೆ. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯ ಸ್ವಲ್ಪ ಮಟ್ಟಿಗೆ ವಿಳಂಬವಾಗಿವೆ. ಆದರೆ, ಇದೀಗ ಬಹು ಹಂತದ ಕಾರ್ಯತಂತ್ರ ರೂಪಿಸಿದೆ ಎಂದು ತಿಳಿಸಿದರು.
ಅಳವಿನಂಚಿನಲ್ಲಿರುವ 117 ಭಾಷೆಗಳ ರಕ್ಷಣೆ: ಇದೇ ವೇಳೆ ಮಾತನಾಡಿರುವ ಕೇಂದ್ರ ಶಿಕ್ಷಣ ಖಾತೆ ರಾಜ್ಯ ಸಚಿವ ಸುಭಾಸ್ ಸರ್ಕಾರ್, ಭಾರತದಾದ್ಯಂತ ಅಳಿವಿನಂಚಿನಲ್ಲಿರುವ ಒಟ್ಟು 117 ಭಾಷೆಗಳು ಮತ್ತು ಮಾತೃಭಾಷೆಗಳನ್ನು ಆದ್ಯತೆಯ ಆಧಾರದ ಮೇಲೆ ಅಧ್ಯಯನ ಮತ್ತು ದಾಖಲೀಕರಣಕ್ಕಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಲಿಖಿತ ರೂಪದಲ್ಲಿ ಉತ್ತರಿಸಿರುವ ಅವರು, ಕೇಂದ್ರ ಸರ್ಕಾರ ಅಳಿವಿನಂಚಿನಲ್ಲಿರುವ ಭಾಷೆಗಳ ರಕ್ಷಣೆ ಮತ್ತು ಸಂರಕ್ಷಣೆ ಯೋಜನೆ (SPPEL)' ಎಂಬ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯಡಿ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜಸ್ (CIIL), ಮೈಸೂರು ಅಳಿವಿನಂಚಿನಲ್ಲಿರುವ ಭಾಷೆಗಳು ಎಂದು ಕರೆಯಲ್ಪಡುವ 10,000 ಕ್ಕಿಂತ ಕಡಿಮೆ ಜನರು ಮಾತನಾಡುವ ಭಾರತದ ಎಲ್ಲ ಮಾತೃಭಾಷೆ ಮತ್ತು ಭಾಷೆಗಳ ದಾಖಲಾತಿ ಮಾಡುತ್ತಿದೆ ಎಂದರು. ಇದಕ್ಕೋಸ್ಕರ 48.90 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿರಿ: ಸೋರುತಿಹುದು ಶಾಲೆ ಮಾಳಿಗೆ.. ಛತ್ರಿ ಹಿಡಿದು ಪಾಠ ಕೇಳುವ ಸ್ಥಿತಿ! ವಿದ್ಯಾರ್ಥಿಗಳ ಗೋಳು ಕೇಳೊರ್ಯಾರು?