ಅಲಿಗಢ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಗಳಿಗೆ ಕಳೆದ ಆರು ದಿನಗಳಿಂದ ನಿತ್ಯ ತಲಾ ಒಂದು ಕೋಟಿಯಂತೆ ಸುಮಾರು ಆರು ಕೋಟಿ ರೂಪಾಯಿ ಹಣ ಜಮೆಯಾಗಿದೆ. ಏಕಾಏಕಿ ಇಷ್ಟೊಂದು ಹಣ ಖಾತೆಗೆ ಜಮೆ ಆಗಿರುವುದರಿಂದ ಅಚ್ಚರಿ ಹಾಗೂ ಗಾಬರಿಗೆ ಒಳಗಾದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಇಲ್ಲಿನ ಭುಜಪುರ ಪ್ರದೇಶದ ನಿವಾಸಿ ಅಸ್ಲಂ ಎಂಬುವರ ಬ್ಯಾಂಕ್ ಖಾತೆಗಳಿಗೆ ಹಣ ಜಮೆಯಾಗಲು ಆರಂಭಿಸಿದೆ. 2010 ರಿಂದ ಮೆಡಿಕಲ್ ಸ್ಟೋರ್ ನಡೆಸುತ್ತಿರುವ ಅಸ್ಲಂ ಕುಟುಂಬಕ್ಕೆ ಅದುವೇ ಜೀವನಾಧಾರವಾಗಿದೆ. ಐಡಿಎಫ್‌ಸಿ ಹಾಗೂ ಯುಕೋ ಬ್ಯಾಂಕ್ನಲ್ಲಿ ತಮ್ಮ ಖಾತೆಗಳನ್ನು ಹೊಂದಿದ್ದಾರೆ. ನವೆಂಬರ್ 11ರಿಂದ ಒಟ್ಟಿಗೆ ಸಾವಿರಾರು, ಲಕ್ಷಾಂತರ ರೂ. ಹಣ ಜಮೆಯಾಗಲು ಆರಂಭಿಸಿದೆ. ಹೀಗೆ ಕಳೆದ 6 ದಿನಗಳಲ್ಲಿ ಅವರ ಖಾತೆಗೆ 6 ಕೋಟಿ ರೂ.ಗೂ ಅಧಿಕ ಹಣ ಸಂದಾಯವಾಗಿದೆ.
ಬ್ಯಾಂಕ್ ಖಾತೆಗೆ ಹಣ ಜಮೆಯಾದ ಬಗ್ಗೆ ಖಾತೆದಾರ ಖುಷಿ ಪಡಬೇಕಿತ್ತು. ಆರೇ ದಿನಗಳಲ್ಲಿ ಕೋಟ್ಯಧಿಪತಿಯಾದ ಸಂಭ್ರಮ ಇರಬೇಕಿತ್ತು. ಆದರೆ, ಹಣದ ಮೂಲ ಅರಿದ ಕಾರಣ ದೊಡ್ಡ ಮಟ್ಟದ ಹಣ ಸಂದಾಯದ ಬಗ್ಗೆ ಆ ವ್ಯಕ್ತಿ ಚಿಂತೆಗೀಡಾಗಿದ್ದಾರೆ. ಹೀಗಾಗಿ ಅವರು ನಿರಂತರವಾಗಿ ಕಚೇರಿಗಳಿಗೆ ಅಲೆಯುತ್ತಿದ್ದಾರೆ. ಇಂದು ಅಸ್ಲಂ ಪೊಲೀಸ್ ಠಾಣೆಗೆ ತೆರಳಿ ಹಣ ಜಮೆಯಾದ ಕುರಿತು ದೂರು ನೀಡಿದ್ದಾರೆ. ಆದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತನಿಖೆಗೂ ಆದೇಶಿಸಿದ್ದಾರೆ.
ಈ ಕುರಿತು ಖಾತೆದಾರ ಅಸ್ಲಂ ಪ್ರತಿಕ್ರಿಯಿಸಿ, ನವೆಂಬರ್ 11ರ ರಾತ್ರಿಯಿಂದ ಬ್ಯಾಂಕ್ ಖಾತೆಗಳಿಗೆ ನಿರಂತರವಾಗಿ ಹಣ ಬರುತ್ತಿದೆ. ಕೆಲವೊಮ್ಮೆ ಒಂದು ಲಕ್ಷ, ಮತ್ತೊಮ್ಮೆ 2 ಲಕ್ಷ ಮತ್ತು ಇನ್ನೊಮ್ಮೆ 25 ಸಾವಿರ ರೂ. ಜಮೆಯಾಗಿದೆ. ನವೆಂಬರ್ 13 ರವರೆಗೆ 4.78 ಕೋಟಿ ರೂ. ಬಂದಿದೆ. ಇದಾದ ನಂತರವೂ ಹಣ ಬರುತ್ತಲೇ ಇದೆ ಎಂದು ಮಾಹಿತಿ ನೀಡಿದ್ದಾರೆ.
ಐಡಿಎಫ್‌ಸಿ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತಿದ್ದರೆ, ಯುಕೋ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗುತ್ತಿದೆ. ಈ ಬಗ್ಗೆ ಪೊಲೀಸ್ ಸಹಾಯವಾಣಿ ಸಂಖ್ಯೆ 112 ಮತ್ತು ಡಿಎಂಗೆ ದೂರು ನೀಡಲಾಗಿದೆ. ಇದರಿಂದ ಸದ್ಯ ಬ್ಯಾಂಕ್ ಖಾತೆಗಳನ್ನು ಫ್ರೀಜ್ ಮಾಡಲಾಗಿದೆ. ನನ್ನ ಸ್ವಂತ ಹಣವೂ ಬ್ಯಾಂಕ್ ಖಾತೆಯಲ್ಲಿದೆ. ಇಲ್ಲಿಯವರೆಗೆ ಯಾವುದೇ ಹಣವನ್ನು ತೆಗೆದುಕೊಂಡಿಲ್ಲ. ಆದರೆ, ನಾನು 5 ಲಕ್ಷ ಹಣ ತೆಗೆದಿದ್ದೇನೆ ಎಂಬುವುದಾಗಿ ಬ್ಯಾಂಕ್ನವರು ಹೇಳುತ್ತಿದ್ದಾರೆ ಎಂದು ತಿಳಿಸಿದ್ಧಾರೆ.
ಹಣ ಬರುವ ಕುರಿತು ಆ್ಯಪ್‌ನಿಂದ ಬ್ಯಾಂಕ್ನ ಸ್ಟೇಟ್ಮೆಂಟ್ ಡೌನ್‌ಲೋಡ್ ಮಾಡಿ ನೋಡಿದ್ದೇನೆ. ಆದರೆ, ಹಣ ಎಲ್ಲಿಂದ ಬರುತ್ತಿದೆ. ಅದರಲ್ಲಿ ಯಾರು ಕಳುಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಎಸ್ಪಿ ತನಿಖೆಗೆ ಆದೇಶಿಸಿದ್ದಾರೆ ಎಂದು ವಿವರಿಸಿದರು. ಮತ್ತೊಂದೆಡೆ, ವಿವಿಧ ಖಾತೆದಾರರಿಗೆ ತಾಂತ್ರಿಕ ದೋಷದಿಂದ ತಪ್ಪಾಗಿ 820 ಕೋಟಿ ರೂಪಾಯಿಯನ್ನು ಜಮೆಯಾಗಿದೆ. ತಕ್ಷಣದ ಪಾವತಿ ಸೇವೆ (IMPS) ಮೂಲಕ ಖಾತೆಗಳಿಗೆ ಜಮೆಯಾಗಿದ್ದು, ಇದುವರೆಗೆ 649 ಕೋಟಿ ರೂ. ಹಣವನ್ನು ಗ್ರಾಹಕರ ಖಾತೆಗಳಿಂದ ಹಿಂಪಡೆಯಲಾಗಿದೆ ಎಂದು ಯುಕೋ ಬ್ಯಾಂಕ್ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
ಇದನ್ನೂ ಓದಿ: ತಾಂತ್ರಿಕ ದೋಷ: ಗ್ರಾಹಕರ ಬ್ಯಾಂಕ್ ಖಾತೆಗಳಿಗೆ 820 ಕೋಟಿ ರೂಪಾಯಿ ಜಮೆ