ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಅಸ್ಸೋಂನಲ್ಲಿ 'ಮಹಾಬಾಹು-ಬ್ರಹ್ಮಪುತ್ರ' ಯೋಜನೆಯನ್ನು ಇಂದು ಉದ್ಘಾಟಿಸಲಿದ್ದಾರೆ.
ಇದಲ್ಲದೆ ಪ್ರಧಾನಿ ಮೋದಿ ಧುಬ್ರಿ-ಫುಲ್ಬಾರಿ ಸೇತುವೆ ನಿರ್ಮಾಣಕ್ಕೆ ಅಡಿಪಾಯ ಹಾಕಲಿದ್ದಾರೆ. ಬಳಿಕ ಮಜುಲಿ ಸೇತುವೆ ನಿರ್ಮಾಣಕ್ಕೆ ಭೂಮಿ ಪೂಜೆ ಕೂಡ ಮಾಡಲಿದ್ದಾರೆ.
ನಾಮಟಿ-ಮಜುಲಿ ದ್ವೀಪಗಳು, ಉತ್ತರ ಗುವಾಹಟಿ-ದಕ್ಷಿಣ ಗುವಾಹಟಿ ಮತ್ತು ಧುಬ್ರಿ-ಹಾಟ್ಸಿಂಗ್‌ಮಾರಿ ಶಿಲಾನ್ಯಾಸ್ (ರೋ-ಪಾಕ್ಸ್) ನಡುವೆ ಒಳನಾಡಿನ ಜಲ ಸಾರಿಗೆಯಲ್ಲಿ ಹಡಗು ಕಾರ್ಯಾಚರಣೆಯನ್ನು ಪ್ರಾರಂಭಿಸುವ ಉದ್ದೇಶವೇ ‘ಮಹಾಬಾಹು-ಬ್ರಹ್ಮಪುತ್ರ’ ಯೋಜನೆಯಾಗಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ವಾಣಿಜ್ಯ ವ್ಯವಹಾರ ಸುಲಭತೆಗಾಗಿ ಡಿಜಿಟಲ್ ಪರಿಹಾರಗಳನ್ನು ಸಹ ಪರಿಚಯಿಸಲಾಗುವುದು. ನಿಮಟಿ, ಬಿಸ್ವಾನಾಥ್ ಘಾಟ್, ಪಾಂಡು ಮತ್ತು ಜೋಗಿಗೋಪ ಪ್ರದೇಶಗಳಲ್ಲಿ 9.41 ಕೋಟಿ ರೂ.ಗಳ ವೆಚ್ಚದಲ್ಲಿ ನಾಲ್ಕು ಪ್ರವಾಸಿ ತಾಣಗಳಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.
ಮಹಾಬಾಹು-ಬ್ರಹ್ಮಪುತ್ರ ಯೋಜನೆ ಉದ್ದೇಶವೇನು?
ಭಾರತದ ಪೂರ್ವ ಭಾಗಗಳಲ್ಲಿ ಸಂಪರ್ಕವನ್ನು ಹೆಚ್ಚಿಸುವುದು ಹಾಗೂ ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳ ತೀರದಲ್ಲಿ ವಾಸಿಸುವವರಿಗೆ ವಿವಿಧ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವುದು 'ಮಹಾಬಾಹು ಬ್ರಹ್ಮಪುತ್ರ'ದ ಉದ್ದೇಶವಾಗಿದೆ.
ರೋ-ಪಾಕ್ಸ್ ಸೇವೆಗಳಿಂದ ನದಿಗಳ ನಡುವಿನ ಸಂಪರ್ಕ ಸಮಯವನ್ನು ಕಡಿತಗೊಳಿಸಿದಂತಾಗುತ್ತೆ. ಇದರಿಂದ ರಸ್ತೆ ಪ್ರಯಾಣಿಕರಿಗೆ ಭಾರೀ ಅನುಕೂಲವಾಗಲಿದೆ. ನಿಮಟಿ-ಮಜುಲಿ ನಡುವಿನ ಅಂತರ ಸುಮಾರು 420 ಕಿ.ಮೀ. ದೂರ ತಗ್ಗಿಸಿದಂತಾಗುತ್ತದೆ. ಪ್ರಸ್ತುತ ಈ ವ್ಯವಸ್ಥೆಯ ಮೂಲಕ ಕೇವಲ 12 ಕಿ.ಮೀ ಮಾತ್ರವೇ ಪ್ರಯಾಣಿಕರು ಪ್ರಯಾಣ ಮಾಡಲಿದ್ದಾರೆ. ಸಣ್ಣ ಪ್ರಮಾಣದ ಕೈಗಾರಿಕಾ ಸರಕು ಸಾಗಣಿಕೆಗೆ ಇದು ತುಂಬಾ ಉಪಯುಕ್ತವಾಗಲಿದೆ.