ರಾಂಚಿ (ಜಾರ್ಖಂಡ್): ಮೋದಿ ಉಪನಾಮದ ಕುರಿತ ವಿವಾದಿತ ಹೇಳಿಕೆ ಪ್ರಕರಣದ ಸಂಬಂಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ರಾಂಚಿಯ ಎಂಪಿ-ಎಂಎಲ್ಎ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಜುಲೈ 4ರಂದು ಯಾವುದೇ ಪರಿಸ್ಥಿತಿಯಲ್ಲಿ ನ್ಯಾಯಾಲಯಕ್ಕೆ ಮುಂದೆ ರಾಹುಲ್ ಖುದ್ದು ಹಾಜರಾಗಬೇಕಿದೆ. ಹೈಕೋರ್ಟ್ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
2019ರಲ್ಲಿ ರಾಂಚಿಯ ಮೊರ್ಹಬಾದಿ ಮೈದಾನದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ರಾಹುಲ್ ಗಾಂಧಿ ಭಾಷಣ ಮಾಡಿ, ಮೋದಿ ಉಪನಾಮ ಹೊಂದಿರುವವರೆಲ್ಲ ಕಳ್ಳರು ಎಂದು ಹೇಳಿಕೆ ನೀಡಿದ್ದರು. ಈ ಕುರಿತು ರಾಂಚಿಯ ವಕೀಲ ಪ್ರದೀಪ್ ಮೋದಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಅಂತೆಯೇ, ವಿಚಾರಣೆಗೆ ಹಾಜರಾಗುವಂತೆ ಮೇ 22ರಂದು ರಾಹುಲ್ ಗಾಂಧಿ ಅವರಿಗೆ ಮೊದಲ ಬಾರಿಗೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ರಾಹುಲ್ ನ್ಯಾಯಾಲಯದ ಮುಂದೆ ಹಾಜರಾಗಿರಲಿಲ್ಲ. ಹೀಗಾಗಿ ಜೂನ್ 16ರಂದು ಹಾಜರಾಗುವಂತೆ ಎರಡನೇ ಸಮನ್ಸ್ ಕಳುಹಿಸಲಾಗಿತ್ತು.
ಇದನ್ನೂ ಓದಿ: ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಹೆಚ್ಚು ಶಿಕ್ಷೆ ಪಡೆದ ಭಾರತದ ಮೊದಲ ವ್ಯಕ್ತಿ ನಾನು: ರಾಹುಲ್ ಗಾಂಧಿ
ಮತ್ತೊಂದೆಡೆ, ಈ ಕುರಿತು ರಾಹುಲ್ ಗಾಂಧಿ ಪರ ವಕೀಲರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ಖುದ್ದು ಹಾಜರಾತಿಗೆ ಹೆಚ್ಚುವರಿಯಾಗಿ 15 ದಿನಗಳ ಕಾಲಾವಕಾಶ ನೀಡಬೇಕೆಂದು ಎಂದು ವಕೀಲರು ನ್ಯಾಯಾಲಯವನ್ನು ಮನವಿ ಮಾಡಿದ್ದರು. ನ್ಯಾಯಾಲಯ ಕೂಡ ಕಾಲಾವಕಾಶ ನೀಡಲು ಸಮ್ಮತಿಸಿತ್ತು. ಆದರೆ, ಇದೀಗ ಹೈಕೋರ್ಟ್ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಲು ನಿರಾಕರಿಸಿ ಅರ್ಜಿಯನ್ನು ತಿರಸ್ಕರಿಸಿದೆ. ಆದ್ದರಿಂದ ರಾಹುಲ್ ಗಾಂಧಿ ಜುಲೈ 4ರಂದು ಖುದ್ದಾಗಿ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗಬೇಕಾಗುತ್ತದೆ.
ಏನಿದು ಮೋದಿ ಉಪನಾಮದ ವಿವಾದ?: 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ರಾಹುಲ್ ಗಾಂಧಿ ಪ್ರಧಾನಿ ಮೋದಿ ಅವರನ್ನು ಗುರಿಸಿಕೊಂಡು ವಾಗ್ದಾಳಿ ನಡೆಸಿದ್ದರು. ಇದೇ ವೇಳೆ, ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ... ಇವರೆಲ್ಲರೂ 'ಮೋದಿ' ಎಂಬ ಸಾಮಾನ್ಯ ಉಪನಾಮವಾಗಿ ಹೊಂದಿದ್ದಾರೆ. ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ ಎಂದು ಹೇಳುವ ಮೂಲಕ ವಿವಾದದ ಸುಳಿಗೆ ಸಿಲುಕಿದ್ದರು.
ಇಂತಹದ್ದೇ ಹೇಳಿಕೆ 2019ರ ಏಪ್ರಿಲ್ 13ರಂದು ಕರ್ನಾಟಕದ ಕೋಲಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲೂ ರಾಹುಲ್ ಗಾಂಧಿ ನೀಡಿದ್ದರು. ರಾಹುಲ್ ಗಾಂಧಿ ಇಡೀ ಮೋದಿ ಸಮುದಾಯವನ್ನು ದೂಷಿಸಿದ್ದಾರೆ ಎಂದು ಸೂರತ್ನ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಇತ್ತೀಚೆಗೆ ಈ ಪ್ರಕರಣದ ತೀರ್ಪು ನೀಡಿದ್ದ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ದೋಷಿ ಎಂದು ಪ್ರಕಟಿಸಿ, ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದರಿಂದ ರಾಹುಲ್ ಗಾಂಧಿ ಈಗಾಗಲೇ ಲೋಕಸಭೆಯ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಜಾರ್ಖಂಡ್ನಲ್ಲೂ ಇದೇ ವಿವಾದದ ಪ್ರಕರಣವನ್ನು ರಾಹುಲ್ ಗಾಂಧಿ ಎದುರಿಸುತ್ತಿದ್ದಾರೆ.
ಇದನ್ನೂ ಓದಿ: 'RaGa ek mohra': ರಾಹುಲ್ ಗಾಂಧಿ ಕುರಿತ ಅನಿಮೇಟೆಡ್ ವಿಡಿಯೋ ಹರಿಬಿಟ್ಟ ಬಿಜೆಪಿ.. ಆದಿಪುರುಷ, ರಾವಣನ ಪಾತ್ರದೊಂದಿಗೆ ಹೋಲಿಕೆ