ಅಲಿಗಢ(ಉ.ಪ್ರ): ಈ ಬಾಲಕನ ಕೈಗೆ ಯಾವುದೇ ಮೊಬೈಲ್ ನೀಡಿದರೂ ಅದರಲ್ಲಿನ ಡೇಟಾ ಸಂಪೂರ್ಣವಾಗಿ ಖಾಲಿಯಾಗುತ್ತದೆ. ಇದು ಪವಾಡವೋ ಅಥವಾ ದೇಹದಲ್ಲಿನ ಕೆಲ ವಿಕಿರಣದಿಂದ ಈ ರೀತಿ ನಡೆಯುತ್ತಿದೆಯೋ ತಿಳಿದಿಲ್ಲ. ಆದರೆ ಇದು ಅಚ್ಚರಿಗೆ ಕಾರಣ ಆಗಿರೋದಂತು ಸತ್ಯ.
14 ವರ್ಷದ ಅಸ್ತಿತ್ವ ಅಗರ್ವಾಲ್ ಎಂಬ ಬಾಲಕನ ಕೈಗೆ ಮೊಬೈಲ್ ನೀಡಿದರೆ ಅದರಲ್ಲಿನ ಡೇಟಾ ಕ್ಷಣಮಾತ್ರದಲ್ಲಿ ಸಂಪೂರ್ಣವಾಗಿ ಖಾಲಿಯಾಗುತ್ತದೆ. ಇದು ಮೇ 2ರಿಂದ ನಡೆಯುತ್ತಿರುವ ಅಚ್ಚರಿಯ ಪ್ರಕರಣ. ಈ ರೀತಿ ಮೊದಲ ಬಾರಿಗೆ ಸಂಭವಿಸಿದಾಗ ಕುಟುಂಬದ ಸದಸ್ಯರು ಗಮನಿಸಿರಲಿಲ್ಲ. ಆದರೆ ಮನೆಯಲ್ಲಿರುವ ಪ್ರತಿಯೊಬ್ಬರ ಮೊಬೈಲ್ನಲ್ಲಿಯೂ ಡೇಟಾ ಖಾಲಿಯಾದಾಗ ಯಾರೋ ಮೊಬೈಲ್ ಹ್ಯಾಕ್ ಮಾಡಿದ್ದಾರೆ ಎಂದು ಭಾವಿಸಿ ಮೊಬೈಲ್ ಸೇವಾ ಕೇಂದ್ರದ ಬಳಿ ತೆರಳಿದ್ದಾರೆ.
ಆದರೆ ಅಲ್ಲಿ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಮನೆಗೆ ಹಿಂದಿರುಗಿದಾಗ ಮತ್ತೆ ಅದೇ ರೀತಿಯಲ್ಲಿ ಡೇಟಾ ಖಾಲಿಯಾಗಲು ಶುರುವಾಯಿತು. ಹೀಗಾಗಿ ಹೊಸ ಮೊಬೈಲ್ ಖರೀದಿಸಿದರು. ಆದರೆ ಸಮಸ್ಯೆ ಹಾಗೆಯೇ ಮುಂದುವರೆದಿತ್ತು. ಆದರೆ ಒಂದು ದಿನ ಮಗನ ಕೈಯಲ್ಲಿ ಮೊಬೈಲ್ ಸೇರಿದಾಗ ಡೇಟಾ ಖಾಲಿಯಾಗುತ್ತದೆ ಎಂಬುದನ್ನು ಪೋಷಕರು ಗಮನಿಸಿದರು.
ಗಮನಕ್ಕೆ ಬಂದಿದ್ದು ಹೀಗೆ...:
ಆಗಸ್ಟ್ 22 ರಂದು ಪತ್ನಿ ರಕ್ಷಾಬಂಧನ ಸಲುವಾಗಿ ತನ್ನ ತಾಯಿಯ ಮನೆಗೆ ಮಗ ಅಸ್ತಿತ್ವನೊಂದಿಗೆ ತೆರಳಿದ್ದಳು. ಅಲ್ಲಿಯೂ ಅದೇ ರೀತಿ ಸಮಸ್ಯೆ ಕಂಡುಬಂತು. ಹೀಗಾಗಿ ಆತನನ್ನು ಸದ್ಯ ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದೇವೆ. ಅಸ್ತಿತ್ವನ ಕೈಯಲ್ಲಿ ಮೊಬೈಲ್ ಕೊಟ್ಟಾಗ ಡೇಟಾ ಖಾಲಿಯಾಗುತ್ತಿದೆ. ಇದಕ್ಕೆ ಕಾರಣ ಏನು ಎಂದು ತಿಳಿಯುತ್ತಿಲ್ಲ ಎಂದು ಗೌರವ್ ಹೇಳುತ್ತಾರೆ.
ಆರೋಗ್ಯ ಪರೀಕ್ಷೆಯಲ್ಲಿ ಎಲ್ಲವೂ ಸಾಮಾನ್ಯ:
ದೇಹದಲ್ಲಿ ಯಾವುದೇ ಮಾನಸಿಕ ಅಥವಾ ದೈಹಿಕ ಬದಲಾವಣೆ ಆಗುತ್ತಿಲ್ಲ ಎಂದು ಅಸ್ತಿತ್ವ ಹೇಳುತ್ತಾನೆ. ಎಂಟು ದಿನಗಳ ಹಿಂದೆ, ತೀವ್ರ ತಲೆನೋವು ಮತ್ತು ವಾಂತಿಯಿಂದಾಗಿ ಆತನನ್ನು ಆಸ್ಪತ್ರೆಯಲ್ಲಿ ಪರೀಕ್ಷಿಸಲಾಯಿತು. ಎಲ್ಲಾ ಪರೀಕ್ಷೆಗಳು ಸಾಮಾನ್ಯವಾಗಿದ್ದವು. ಈ ಸಮಸ್ಯೆಗೆ ಸಂಬಂಧಿಸಿದಂತೆ ಕುಟುಂಬವು ಅನೇಕ ವೈದ್ಯರ ಬಳಿ ತೆರಳಿದೆ. ಆದರೂ ಈ ಸಮಸ್ಯೆ ಬಗೆಹರಿಯುತ್ತಿಲ್ಲ.
ವೈದ್ಯರು ಹೇಳಿದ್ದು ಹೀಗೆ..:
ಜೆ.ಪಿ ಆಸ್ಪತ್ರೆಯ ಹಿರಿಯ ನರವಿಜ್ಞಾನಿ ಡಾ.ಸಂದೀಪ್ ಈ ಬಗ್ಗೆ ಮಾತನಾಡಿದ್ದಾರೆ. ಅಸ್ತಿತ್ವನಲ್ಲಿ ಕಂಡುಬಂದಂತಹ ಪ್ರಕರಣ ಇದೇ ಮೊದಲ ಬಾರಿ ನಾನು ನೋಡಿದ್ದೇನೆ. ಎಲ್ಲಾ ರೀತಿಯಲ್ಲಿ ಪರೀಕ್ಷಿಸಲಾಗಿದೆ. ಸದ್ಯ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಮಾಹಿತಿ ಸಂಗ್ರಹಿಸುತ್ತೇವೆ. ಆದರೆ ಈ ವಿಷಯ ಮಾತ್ರ ಸದ್ಯ ಒಗಟಾಗಿ ಉಳಿದಿದೆ ಎನ್ನುತ್ತಾರೆ.
ಬಾಲಕ ಅಸ್ತಿತ್ವನಲ್ಲಿ ಕಂಡುಬಂದ ಈ ಪ್ರಕರಣ ನಂಬಲಸಾಧ್ಯವಾದದ್ದು ಎಂದು ಮಕ್ಕಳ ವೈದ್ಯೆ ವಿಭವ ವರ್ಷಣಿ ಹೇಳುತ್ತಾರೆ. "ನಾನು ಇದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನಿರಾಕರಿಸುತ್ತೇನೆ. ಆದರೆ ಒಂದು ಶೇಕಡಾ ಸಾಧ್ಯತೆ ಇರಬಹುದು. ಕೆಲವೊಮ್ಮೆ ದೇಹದ ಕಾಂತೀಯ ಶಕ್ತಿಯಿಂದಾಗಿ ಇದು ಸಂಭವಿಸಬಹುದು. ವಿಕಿರಣದ ಮೂಲಕ ಸಾಫ್ಟ್‌ವೇರ್ ದೋಷಗಳ ಅಪರೂಪದ ಪ್ರಕರಣವೂ ಇರಬಹುದು. ಈ ಕುರಿತು ವೈಜ್ಞಾನಿಕತೆ ಕೆಲಸ ಮಾಡಿಲ್ಲ. ವೈಜ್ಞಾನಿಕ ತನಿಖೆಯ ನಂತರವೇ ಇದರ ಬಗ್ಗೆ ಏನನ್ನಾದರೂ ಹೇಳಬಹುದು. ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುವುದು ಅಗತ್ಯ" ಎಂದು ಹೇಳಿದರು. ಕೆಲವೊಮ್ಮೆ ಜನರು ಜನಪ್ರಿಯವಾಗಲು ಈ ಕೆಲಸಗಳನ್ನು ಮಾಡುತ್ತಾರೆ. ಆದರೆ ಅದರ ವಿಶ್ವಾಸಾರ್ಹತೆಯನ್ನು ಪರಿಶೀಲಿಸಬೇಕು ಎಂದರು.