ಮಹಾರಾಷ್ಟ್ರ: ಮಹಾರಾಷ್ಟ್ರ ನವನಿರ್ಮಾಣ್ ಸೇನಾ (ಎಂಎನ್‌ಎಸ್) ನಾಯಕ ಜಮೀಲ್ ಶೈಖ್(49) ಅವರನ್ನು ರಬೋಡಿ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳು ಸೋಮವಾರ ಗುಂಡಿಕ್ಕಿ ಕೊಂದಿದ್ದಾರೆ.
ಬೈಕ್‌ನಲ್ಲಿ ಹೋಗುತ್ತಿದ್ದ ಜಮೀಲ್‌ನನ್ನು ಹಿಂಬಾಲಿಸಿದ ಇಬ್ಬರು ಬೈಕ್ ಸವಾರರು ಅವರ ತಲೆಯ ಹಿಂಭಾಗಕ್ಕೆ ಗುಂಡು ಹಾರಿಸಿದ್ದಾರೆ. ಅಸ್ವಸ್ತಗೊಂಡ ಜಮೀಲ್‌ನನ್ನು ಆ ಕೂಡಲೇ ಜುಪಿಟರ್ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಜಮೀಲ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜೆಜೆ ಆಸ್ಪತ್ರೆಗೆ ಸಾಗಿಸಲಾಗಿದ್ದು, ಕೊಲೆಗೆ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಹಲ್ಲೆಕೋರರ ಶೋಧಕಾರ್ಯ ಮುಂದುವರೆದಿದ್ದು, ಸುತ್ತಮುತ್ತಲ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಕಲೆಹಾಕಲಾಗುತ್ತಿದೆ.
ಸಿಸಿಟಿವಿ ವಿಡಿಯೋದಲ್ಲಿ, ಜಮೀಲ್ ಬೈಕ್‌ನಲ್ಲಿ ಹೆಲ್ಮೆಟ್ ಇಲ್ಲದೇ ನೀಲಿ ಬಣ್ಣದ ಉಡುಗೆಯಲ್ಲಿ ತೆರಳುತ್ತಿರುವುದನ್ನು ನೋಡಬಹುದು. ಅವರನ್ನು ಇನ್ನೂ ಇಬ್ಬರು ಬೈಕ್‌ನಲ್ಲಿ ಹಿಂಬಾಲಿಸಿದ್ದಾರೆ. ಅವರನ್ನು ಹಿಂಬಾಲಿಸಿದ ಬೈಕ್‌ನಲ್ಲಿ ಕುಳಿತ ವ್ಯಕ್ತಿಯು ಜಮೀಲ್ ತಲೆಗೆ ಹಿಂದಿನಿಂದ ಗುಂಡು ಹಾರಿಸಿದ್ದು, ಒಮ್ಮೆ ಗುರಿ ತಪ್ಪಿದೆ. ಮತ್ತೊಮ್ಮೆ ಪ್ರಯತ್ನಿಸಿ ಜಮೀಲ್ ತಲೆಗೆ ಗುಂಡು ಹಾರಿಸಿದ್ದಾನೆ. ಜಮೀಲ್ ಬೈಕ್‌ನೊಂದಿಗೆ ನೆಲದ ಮೇಲೆ ಬಿದ್ದಿದ್ದು, ಅದೇ ವೇಳೆ ಹಲ್ಲೆಕೋರರು ತಪ್ಪಿಸಿಕೊಂಡಿದ್ದಾರೆ.
ಸದ್ಯ ಆ ಹಲ್ಲೆಕೋರರ ಪತ್ತೆಗೆ ಪೊಲೀಸರು ಶೋಧಕಾರ್ಯ ಕೈಗೊಂಡಿದ್ದಾರೆ.