ಎರ್ನಾಕುಲಂ(ಕೇರಳ): ಹಿರಿಯ ಕಾಂಗ್ರೆಸ್ ನಾಯಕ, ಹಾಲಿ ಶಾಸಕ ಪಿಟಿ ಥಾಮಸ್ ತಮಿಳುನಾಡಿನ ವೆಲ್ಲೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ಥಾಮಸ್ ಅವರು ದೀರ್ಘಕಾಲದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ನಾಲ್ಕು ಬಾರಿ ಶಾಸಕರಾಗಿರುವ ಪಿಟಿ ಥಾಮಸ್ ಕೇರಳದಲ್ಲಿ ತಳಮಟ್ಟದಿಂದ ಕಾಂಗ್ರೆಸ್ ಪಕ್ಷ ಪಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ನಾಯಕರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಥಾಮಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಪರಿಸರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ತಮ್ಮ ಅಚಲ ನಿಲುವಿನಿಂದಲೇ ಹೆಸರುವಾಸಿಯಾಗಿದ್ದ ಥಾಮಸ್ ಕಾಂಗ್ರೆಸ್ ಪಕ್ಷದಿಂದ ಗಾಡ್ಗೀಳ್ ಸಮಿತಿಯ ವರದಿಯ ಏಕೈಕ ಬೆಂಬಲಿಗರಾಗಿದ್ದರು.
ಹಲವಾರು ವರ್ಷಗಳಿಂದ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದರೂ ಇವರು ಸಕ್ರಿಯ ರಾಜಕೀಯದಲ್ಲಿ ಮುಂದುವರೆದಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ತ್ರಿಕ್ಕಾಕರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. ಪ್ರಸ್ತುತ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.
ಆರೋಗ್ಯ ಸ್ಥಿತಿ ಹದಗೆಟ್ಟಾಗ ಕೀಮೋಥೆರಪಿಗಾಗಿ ಪಿಟಿ ಅವರನ್ನು ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಿಸಲಾಗಿತ್ತು. ಆದರೆ, ಇಂದು ಬೆಳಗ್ಗೆ 10.15ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: 9 ವರ್ಷದ ಕಾನೂನು ಹೋರಾಟದಲ್ಲಿ ಜಯ : ಅಪಘಾತದಲ್ಲಿ ಶ್ವಾನ ಕಳೆದುಕೊಂಡ ವ್ಯಕ್ತಿಗೆ 3 ಲಕ್ಷ ರೂ. ಪರಿಹಾರ..