ನವದೆಹಲಿ: ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಮ್ಮುಖದಲ್ಲಿ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದ ಮಿಥುನ್ ಚಕ್ರವರ್ತಿಗೆ ಇದೀಗ Y+ ಭದ್ರತೆ ನೀಡಲಾಗಿದೆ. ಕೇಂದ್ರ ಗೃಹ ಸಚಿವಾಲಯದಿಂದ ಅವರಿಗೆ ಭದ್ರತೆ ನೀಡಲಾಗಿದ್ದು, ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್ಎಫ್) ಇದೀಗ ರಕ್ಷಣೆ ನೀಡಲಿದೆ.
Y+ ಭದ್ರತೆ ಪಡೆದುಕೊಳ್ಳುವ ವ್ಯಕ್ತಿ 11 ಕಮಾಂಡೊ ಒಳಗೊಂಡ ವಿಸ್ತಾರವಾದ ಭದ್ರತೆ ಪಡೆದುಕೊಳ್ಳಲಿದ್ದು, 55ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ನಿವಾಸದ ಸುತ್ತ ನಿಯೋಜನೆಗೊಳ್ಳಲಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಬಂಗಾಳದಲ್ಲಿ ಅನೇಕ ವ್ಯಕ್ತಿಗಳಿಗೆ ಈ ರೀತಿಯ ಭದ್ರತೆ ನೀಡಲಾಗಿದ್ದು, ಒಂದೇ ತಿಂಗಳಲ್ಲಿ ಬಂಗಾಳದಲ್ಲಿ ಸುಮಾರು 60 ಮುಖಂಡರಿಗೆ ಕೇಂದ್ರ ಗೃಹ ಸಚಿವಾಲಯ X ಮತ್ತು Y ಮಟ್ಟದ ಭದ್ರತೆ ನೀಡಿದೆ.
ಇದನ್ನೂ ಓದಿ: ನಾನು ವಿಷಸರ್ಪ, ಕಚ್ಚಿದರೆ ನೀವು ಉಳಿಯಲ್ಲ; ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ ಮಾತು
ಪಶ್ಚಿಮ ಬಂಗಾಳದಲ್ಲಿ ಸಿಪಿಐ(ಎಂ) ಸರ್ಕಾರ ಅಧಿಕಾರದಲ್ಲಿದ್ದ ವೇಳೆ ಮಿಥುನ್ ಚಕ್ರವರ್ತಿ ಉತ್ತಮ ರಾಜಕೀಯ ಒಡನಾಟ ಹೊಂದಿದ್ದರು. ತದನಂತರ ತೃಣಮೂಲ ಕಾಂಗ್ರೆಸ್ ಸೇರಿಕೊಂಡಿದ್ದ ಅವರನ್ನ ರಾಜ್ಯಸಭೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಬಿಜೆಪಿ ಸೇರ್ಪಡೆಗೊಂಡಿದ್ದಾರೆ.70 ವರ್ಷದ ಖ್ಯಾತ ಬಾಲಿವುಡ್ ನಟ ಹಾಗೂ ಮಾಜಿ ಟಿಎಂಸಿ ಮುಖಂಡ ಮಿಥುನ್ ಚಕ್ರವರ್ತಿಗೆ ಪಶ್ಚಿಮ ಬಂಗಾಳದಲ್ಲಿ ಬಹುದೊಡ್ಡ ಅಭಿಮಾನಿಗಳ ಪಡೆಯೇ ಇದೆ.