ತಿರುನಲ್ವೇಲಿ(ತಮಿಳುನಾಡು): ತಮಿಳುನಾಡಿನ ತಿರುನಲ್ವೇಲಿಯಲ್ಲಿ ಬಾವಿಯೊಂದು ಮಳೆಯ ಪ್ರವಾಹದ ನೀರನ್ನೇ ಆಪೋಷನ ತೆಗೆದುಕೊಂಡಿದ್ದರೂ ಭರ್ತಿಯಾಗದೇ ಆಶ್ಚರ್ಯ ಮೂಡಿಸಿದೆ.
ತಿರುನೆಲ್ವೇಲಿ ಜಿಲ್ಲೆಯ ತಿಸಯ್ಯನ್ವೇಲಿ ಪಟ್ಟಣದ ಸಮೀಪದ ಆಯಂಕುಳಂ ಪಡುಗೈ ಎಂಬ ಗ್ರಾಮದಲ್ಲಿ ಈ ಮಾಯಾ ಬಾವಿ ಇದೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ಇಡೀ ಗ್ರಾಮವೇ ಜಲಾವೃತಗೊಂಡಿತ್ತು. ಕೆರೆಗಳು ತುಂಬಿ ಹರಿದಿದ್ದವು.
ಇದರಿಂದ ನೀರಿನ ಪ್ರವಾಹ ಕಡಿಮೆಯಾಗಲಿ ಎಂದು ಪಕ್ಕವೇ ಇದ್ದ ಆಳವಾದ ಬಾವಿಗೆ ಕಾಲುವೆ ಮೂಲಕ ನೀರು ಹರಿಸಲಾಗಿದೆ. ವಿಚಿತ್ರ ಅಂದ್ರೆ ಬಾವಿಗೆ ನೀರಿನ ಪ್ರವಾಹವೇ ಹರಿದರೂ ನೀರಿನ ಮಟ್ಟ ಏರಿಕೆ ಆಗುತ್ತಲೇ ಇಲ್ಲವಂತೆ. ಇದು ಅಲ್ಲಿನ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ಈ ವಿಸ್ಮಯಕಾರಿ ಬಾವಿಯನ್ನು ನೋಡಲು ಸುತ್ತಮುತ್ತಲಿನ ಗ್ರಾಮಗಳ ಜನರು ಮುಗಿಬೀಳುತ್ತಿದ್ದಾರೆ. ಮಳೆ ನೀರಿನ ಪ್ರವಾಹದ ನೀರನ್ನೇ ತನ್ನ ಒಡಲಲ್ಲಿ ತುಂಬಿಕೊಂಡ ಈ ಬಾವಿ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.