ನವದೆಹಲಿ: ಹಿಂಸಾಚಾರ ಪೀಡಿತ ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸುವ ಸರ್ಕಾರದ ಯೋಜನೆಯ ಭಾಗವಾಗಿ ಭಾರತವು ಎರಡು C-130J ಮಿಲಿಟರಿ ಸಾರಿಗೆ ವಿಮಾನಗಳನ್ನು ಸೌದಿ ಅರೇಬಿಯದ ಜೆಡ್ಡಾದ ಸ್ಟ್ಯಾಂಡ್‌ಬೈನಲ್ಲಿ ಇರಿಸಿದೆ. ಈ ಅನುಕ್ರಮದಲ್ಲಿ ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಮೇಧಾ ಹಡಗು ಕೂಡ ಸುಡಾನ್ ತಲುಪಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಭಾನುವಾರ ಈ ಕುರಿತು ಮಾಹಿತಿ ನೀಡಿದೆ.
ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ತುರ್ತು ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲಿಯ ಭದ್ರತಾ ಪರಿಸ್ಥಿತಿ ಬಗ್ಗೆ ಗಮನಹರಿಸಲಾಗುತ್ತಿದೆ. ಸುಡಾನ್‌ನ ರಾಜಧಾನಿ ಖಾರ್ಟೂಮ್‌ನಲ್ಲಿ ಭದ್ರತಾ ಪರಿಸ್ಥಿತಿಯು ಅಸ್ಥಿರವಾಗಿದ್ದು, ಅಲ್ಲಿ ಹಲವು ಸ್ಥಳಗಳಲ್ಲಿ ಭೀಕರ ಘರ್ಷಣೆಗಳು ಇನ್ನು ಮುಂದುವರೆದಿವೆ. ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷತೆಗಾಗಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ನಾವು ಸುಡಾನ್‌ನಲ್ಲಿ ಉದ್ಭವಿಸುವ ಬಿಕ್ಕಟ್ಟು ಮತ್ತು ಭದ್ರತಾ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ.
ಸುಡಾನ್‌ನಲ್ಲಿ ಸಿಲುಕಿರುವ ಮತ್ತು ಅಲ್ಲಿಂದ ಹೊರಬರಲು ಆಗದೇ ಇರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಅಲ್ಲಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೇ ಅಲ್ಲಿಯ ಭಾರತೀಯರೊಂದಿಗೂ ನಿರಂತರ ಸಂಪರ್ಕದಲ್ಲಿದ್ದು, ಸುರಕ್ಷಿತವಾಗಿರಲು ಸಲಹೆ ನೀಡುತ್ತಿರುವುದಾಗಿ ಹೇಳಿದೆ.
ಭಾರತೀಯ ಪ್ರಜೆಗಳ ಸ್ಥಳಾಂತರ ಕಾರ್ಯಾಚರಣೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಸುಡಾನ್‌ನ ಭಾರತೀಯ ರಾಯಭಾರ ಕಚೇರಿ, ಸುಡಾನ್ ಅಧಿಕಾರಿಗಳು, ಸೌದಿ ಅರೇಬಿಯಾ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಈಜಿಪ್ಟ್ ಮತ್ತು ಯುಎಸ್ ಸೇರಿದಂತೆ ಹಲವಾರು ದೇಶಗಳೊಂದಿಗೆ ಸಂಪರ್ಕದಲ್ಲಿದೆ. ಭಾರತ ಸರ್ಕಾರವು ಭಾರತೀಯ ಪ್ರಜೆಗಳ ಸ್ಥಳಾಂತರ ಕಾರ್ಯಾಚರಣೆಯನ್ನು ವೇಗವಾಗಿ ಪೂರ್ಣಗೊಳಿಸಲು ಹಲವಾರು ಆಯಾಮಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತೀಯ ವಾಯುಪಡೆಯ ಎರಡು C-130J (ವಿಮಾನಗಳು) ಪ್ರಸ್ತುತ ಜೆಡ್ಡಾದಲ್ಲಿ ಟೇಕ್ ಆಫ್ ಮಾಡಲು ಸಿದ್ಧವಾಗಿವೆ. INS ಸುಮೇಧಾ ಕೂಡ ಭಾರತೀಯರನ್ನ ಕರೆತರಲು ಎಲ್ಲ ಸಿದ್ದತೆಗಳೊಂದಿಗೆ ತಯಾರಾಗಿದೆ ಎಂದು ಸಚಿವಾಲಯ ಹೇಳಿದೆ.
ಪ್ರಧಾನಿ ಮೋದಿ ಸಭೆ: ಸುಡಾನ್‌ನಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉನ್ನತ ಮಟ್ಟದ ಸಭೆ ನಡೆಸಿದ್ದರು. ಸಭೆಯಲ್ಲಿ ಸುಡಾನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಬಗ್ಗೆ ಚರ್ಚಿಸಲಾಗಿತ್ತು. ಪ್ರಸ್ತುತ ಸುಡಾನ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ಸಿಲುಕಿಕೊಂಡಿದ್ದಾರೆ. ಇನ್ನು ಈ ಸಭೆಯಲ್ಲಿ ವಿದೇಶಾಂಗ ಸಚಿವ ಜೈಶಂಕರ್, ಕಾರ್ಯದರ್ಶಿ ಸಿಪಿವಿ ಔಸಫ್ ಸಯೀದ್ ಮತ್ತು ಭಾರತೀಯರನ್ನು ಸ್ಥಳಾಂತರಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದಾದ ಪ್ರದೇಶದ (ಗಲ್ಫ್ ರಾಷ್ಟ್ರಗಳು) ಪ್ರಮುಖ ರಾಯಭಾರಿಗಳು ಭಾಗವಹಿಸಿದ್ದರು.
150 ಮಂದಿ ಸ್ಥಳಾಂತರ: ಶನಿವಾರದಂದು ಸೌದಿ ಅರೇಬಿಯಾ ಮೊದಲ ಕಾರ್ಯಾಚರಣೆಯಲ್ಲಿ ಸುಮಾರು 150 ಜನರನ್ನು ಸುಡಾನ್‌ನಿಂದ ಸ್ಥಳಾಂತರಿಸಿದೆ. ಅವರಲ್ಲಿ ಸುಮಾರು 91 ಮಂದಿ ಸೌದಿ ಪ್ರಜೆಗಳು ಮತ್ತು 66 ಮಂದಿ ವಿದೇಶಿಯರು ಮತ್ತು ಭಾರತೀಯರು ಇದ್ದರು. ಸೌದಿ ನೌಕಾಪಡೆಯ ಹಡಗಿನ ಮೂಲಕ ಜನರನ್ನು ಸ್ಥಳಾಂತರಿಸಲಾಗಿದೆ.
ಘಟನೆ ಹಿನ್ನೆಲೆ: ಸೇನೆ ಮತ್ತು ಅರೆಸೇನಾ ಪಡೆಗಳ ನಡುವಿನ ಕಾಳಗದಿಂದಾಗಿ ಸುಡಾನ್ ಹಿಂಸಾಚಾರ ಎದುರಿಸುತ್ತಿದೆ. ಎರಡು ಪ್ರತಿಸ್ಪರ್ಧಿ ಮಿಲಿಟರಿ ಬಣಗಳ ನಡುವಿನ ಹೋರಾಟದಲ್ಲಿ ಈ ವರೆಗೂ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ರಂಜಾನ್ ಹಬ್ಬದ ಪ್ರಯುಕ್ತ 72 ಗಂಟೆಗಳ ಕದನ ವಿರಾಮ ಘೋಷಿಸಲಾಗಿತ್ತಾದರೂ ಸುಡಾನ್‌ನಲ್ಲಿ ಹಿಂಸಾಚಾರ ಮುಂದುವರೆದಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಶನಿವಾರದಂದು, ಮುಖ್ಯವಾಗಿ ಮಿಲಿಟರಿ ಪ್ರಧಾನ ಕಚೇರಿ ಮತ್ತು ಅಧ್ಯಕ್ಷೀಯ ಭವನದ ಬಳಿ ಸ್ಫೋಟಗಳು ಮತ್ತು ಘರ್ಷಣೆಗಳು ನಡೆದಿರುವ ಬಗ್ಗೆಯೂ ವರದಿಯಾಗಿವೆ.
ಇದನ್ನೂ ಓದಿ: ಪಿಎಂ ಮೋದಿ, ಜೈಶಂಕರ್ ಮನವಿ: ಸುಡಾನ್‌ನಿಂದ ಭಾರತೀಯರ ಸ್ಥಳಾಂತರಿಸಿದ ಸೌದಿ ಅರೇಬಿಯಾ