ನವದೆಹಲಿ: ಪ್ರಮುಖ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಸಾರ್ವಜನಿಕರು ಬಳಸುವ ರಾಷ್ಟ್ರಧ್ವಜವನ್ನು (ಕಾಗದದಿಂದ ಮಾಡಿದ ಬಾವುಟ) ಎಲ್ಲೆಂದರಲ್ಲಿ ಎಸೆಯುವಂತಿಲ್ಲ ಎಂದು ಗೃಹ ವ್ಯವಹಾರಗಳ ಸಚಿವಾಲಯ (MHA) ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗದರ್ಶಿ ರೂಪಿಸುವ ಮೂಲಕ ಸೂಚನೆ ನೀಡಿದೆ.
ದೇಶದಾದ್ಯಂತ ಗಣರಾಜ್ಯೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಚಿವಾಲಯ ಶುಕ್ರವಾರದಂದು ಭಾರತದ ಧ್ವಜ ಸಂಹಿತೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದೆ.
ಸೂಚನೆಯಲ್ಲಿ, ಭಾರತೀಯ ರಾಷ್ಟ್ರಧ್ವಜವು ನಮ್ಮ ದೇಶದ ಜನರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಪ್ರತಿನಿಧಿಸುತ್ತದೆ. ಗೌರವದ ಸ್ಥಾನ ಹೊಂದಿದೆ. ರಾಷ್ಟ್ರಧ್ವಜದ ಮೇಲೆ ಸಾರ್ವತ್ರಿಕ ಪ್ರೀತಿ, ಗೌರವ ಮತ್ತು ನಿಷ್ಠೆ ಇದೆ.
ಆದರೂ ರಾಷ್ಟ್ರೀಯ ಧ್ವಜದ ಪ್ರದರ್ಶನಕ್ಕೆ ಅನ್ವಯಿಸುವ ಕಾನೂನುಗಳು, ಆಚರಣೆಗಳು ಮತ್ತು ಸಂಪ್ರದಾಯಗಳಿಗೆ ಸಂಬಂಧಿಸಿದಂತೆ ಜನರು ಮತ್ತು ಸರ್ಕಾರದ ಸಂಸ್ಥೆಗಳಲ್ಲಿ ಅರಿವಿನ ಕೊರತೆ ಎದ್ದು ಕಾಣುತ್ತಿದೆ ಎಂದು ಸಚಿವಾಲಯ ಅಭಿಪ್ರಾಯಪಟ್ಟಿದ್ದು, ರಾಷ್ಟ್ರ ಧ್ವಜದ ಸಂಹಿತೆ ಪಾಲಿಸುವಂತೆ ಮನವಿ ಮಾಡಿಕೊಂಡಿದೆ.
ಭಾರತದ ಧ್ವಜ ಸಂಹಿತೆ ಪ್ರಕಾರ, ಪ್ರಮುಖ ರಾಷ್ಟ್ರೀಯ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಕಾಗದದಿಂದ ಮಾಡಿದ ತಿವರ್ಣ ಧ್ವಜವನ್ನು ಸಾರ್ವಜನಿಕರು ಬಳಸಬಹುದು/ಬೀಸಬಹುದು ಆದರೆ ಎಲ್ಲೆಂದರಲ್ಲಿ ಬಿಸಾಡುವಂತಿಲ್ಲ. ಧ್ವಜಗಳು ಎಲ್ಲೆಂದರಲ್ಲಿ ಬೀಳದಂತೆ ಮುಂಜಾಗ್ರತೆ ವಹಿಸುವಂತೆ ಹಾಗೆ ಆಗದಂತೆ ಕ್ರಮ ವಹಿಸುವಂತೆ ರಾಜ್ಯಗಳಿಗೆ ಗೃಹ ಸಚಿವಾಲಯ ವಿನಂತಿಸಿದೆ.
ಇದನ್ನೂ ಓದಿ: ಸ್ಟಾರ್ಟ್ಅಪ್ಗಳು ಭಾರತದ ಬೆನ್ನೆಲುಬಾಗಲಿವೆ : ಪ್ರಧಾನಿ ಮೋದಿ
ರಾಷ್ಟ್ರೀಯ ಧ್ವಜಗಳನ್ನು ಖಾಸಗಿಯಾಗಿ, ಧ್ವಜದ ಘನತೆಗೆ ಅನುಗುಣವಾಗಿ ವಿಲೇವಾರಿ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಜನಜಾಗೃತಿ ಕಾರ್ಯಕ್ರಮ ಕೈಗೊಳ್ಳುವಂತೆ ಸೂಚನೆಯೊಂದಿಗೆ ಮನವಿ ಮಾಡಲಾಗಿದೆ.