ಶ್ರೀನಗರ(ಜಮ್ಮು ಕಾಶ್ಮೀರ): ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಜಮ್ಮು ಕಾಶ್ಮೀರ ಮೂಲದ ಡಾ. ಆಸಿಫ್ ಮಕ್ಬೂಲ್ ಅವರನ್ನು ಭಯೋತ್ಪಾದಕ ಎಂದು ಕೇಂದ್ರ ಗೃಹ ಸಚಿವಾಲಯ ಶನಿವಾರ ಘೋಷಿಸಿದೆ. ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ ಕಾಯ್ದೆ)-1967ರ ಅಡಿಯಲ್ಲಿ ಇವರನ್ನು ಭಯೋತ್ಪಾದಕ ಎಂದು ಘೋಷಿಸಲಾಗಿದೆ. ಪ್ರಸ್ತುತ ಸೌದಿ ಅರೇಬಿಯಾ ದೇಶದ ದಮನ್, ಆಶ್ ಶರ್ಕಿಯಾ, ಧಹ್ರಾನ್ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ, ಬಾರಾಮುಲ್ಲಾದ ವಾಗೂರಾದ ಬಂದೇ ಪಯೀನ್ ಪ್ರದೇಶದ ನಿವಾಸಿ ಡಾ. ಆಸಿಫ್ ಮಕ್ಬೂಲ್ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.
ಕಾಶ್ಮೀರ ಕಣಿವೆಯ ಯುವಕರಿಗೆ ಭಯೋತ್ಪಾದನೆ ಸೇರಲು ಪ್ರೇರೇಪಣೆ.. ಡಾ. ಆಸಿಫ್ ಮಕ್ಬೂಲ್ ದಾರ್ ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ಬಳಸಿಕೊಂಡು ಕಾಶ್ಮೀರ ಕಣಿವೆಯ ಯುವಕರನ್ನು ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುವಲ್ಲಿ ಅಥವಾ ಪ್ರಚೋದಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗೃಹ ಸಚಿವಾಲಯ ಹೇಳಿದೆ. ಡಾ. ಆಸಿಫ್ ಮಕ್ಬೂಲ್ ದಾರ್ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿರುವ ಪ್ರಮುಖ ತೀವ್ರಗಾಮಿ ಧ್ವನಿಗಳಲ್ಲೊಬ್ಬನಾಗಿದ್ದಾರೆ. ಭಾರತ ಸರ್ಕಾರ ಮತ್ತು ಭದ್ರತಾ ಪಡೆಗಳ ವಿರುದ್ಧ ಶಸ್ತ್ರಾಸ್ತ್ರಗಳನ್ನೆತ್ತಿಕೊಂಡು ಹೋರಾಟ ನಡೆಸುವಂತೆ ಇವರು ಕಾಶ್ಮೀರಿ ಯುವಕರನ್ನು ಪ್ರಚೋದಿಸುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಭಾರತದ ಪ್ರಮುಖ ನಗರಗಳಲ್ಲಿ ಹಿಂಸಾತ್ಮಕ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಭಯೋತ್ಪಾದಕ ಸಂಘಟನೆಯ ಕಾರ್ಯಕರ್ತರು ರೂಪಿಸಿದ ಸಂಚಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಯು ತನಿಖೆ ನಡೆಸಿದ ಪ್ರಕರಣದಲ್ಲಿ ಡಾ. ಆಸಿಫ್ ಮಕ್ಬೂಲ್ ದಾರ್ ಆರೋಪಿಯಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ದೇಶದಲ್ಲಿ ಯುಎಪಿಎ ಅಡಿಯಲ್ಲಿ ಭಯೋತ್ಪಾದಕ ಎಂದು ಘೋಷಿಸಲ್ಪಟ್ಟ 52 ನೇ ವ್ಯಕ್ತಿಯಾಗಿದ್ದಾರೆ ಆಸಿಫ್ ಮಕ್ಬೂಲ್.
ಅರ್ಬಾಜ್ ಅಹ್ಮದ್ ಮೀರ್ನನ್ನು ಕೂಡ ಭಯೋತ್ಪಾದಕ ಎಂದು ಘೋಷಿಸಿದ ಗೃಹ ಸಚಿವಾಲಯ: ಇದಕ್ಕೂ ಮುನ್ನ ಮಹಿಳಾ ಶಿಕ್ಷಕಿ ರಜನಿ ಬಾಲಾ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಉದ್ದೇಶಿತ ಹತ್ಯೆಗಳಲ್ಲಿ ಭಾಗಿಯಾಗಿದ್ದಕ್ಕಾಗಿ ಲಷ್ಕರ್-ಎ-ತೈಬಾ ಭಯೋತ್ಪಾದಕ ಅರ್ಬಾಜ್ ಅಹ್ಮದ್ ಮೀರ್ ಎಂಬಾತನನ್ನು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967 ರ ಅಡಿಯಲ್ಲಿ ಭಯೋತ್ಪಾದಕ ಎಂದು ಗೃಹ ಸಚಿವಾಲಯ ಹೆಸರಿಸಿದೆ.
ಹಿಂದೂ ಸಮುದಾಯದವರನ್ನು ನಿರ್ದಿಷ್ಟವಾಗಿ ಹತ್ಯೆ ಮಾಡಿರುವ ಪ್ರಕರಣದಲ್ಲಿ ಮೀರ್ ಭಾಗಿಯಾಗಿದ್ದಾನೆ ಮತ್ತು ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ನಲ್ಲಿ ರಜನಿ ಬಾಲಾ ಎಂಬ ಮಹಿಳಾ ಶಿಕ್ಷಕಿಯನ್ನು ಹತ್ಯೆ ಮಾಡುವಲ್ಲಿ ಪ್ರಮುಖ ಸಂಚುಗಾರನಾಗಿದ್ದಾನೆ. ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಸಂಘಟಿಸುವಲ್ಲಿ ಮತ್ತು ಗಡಿಯಾಚೆಯಿಂದ ಅಕ್ರಮ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಅಥವಾ ಸ್ಫೋಟಕಗಳನ್ನು ಸಾಗಿಸುವ ಮೂಲಕ ಭಯೋತ್ಪಾದಕರನ್ನು ಬೆಂಬಲಿಸುವಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಜಮ್ಮುವಿನ ರಜನಿ ಬಾಲಾ ಅವರನ್ನು ಮೇ 31, 2022 ರಂದು ಕುಲ್ಗಾಮ್ ಜಿಲ್ಲೆಯ ಗೋಪಾಲ್ಪೋರಾದ ಸರ್ಕಾರಿ ಪ್ರೌಢಶಾಲೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು.
ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗುಫ್ಬಾಲ್ ಗ್ರಾಮಕ್ಕೆ ಸೇರಿದ ಮಂಜೂರ್ ಅಹ್ಮದ್ ಮಿರ್ ಎಂಬುವರ ಪುತ್ರ ಅರ್ಬಾಜ್ ಅಹ್ಮದ್ ಮೀರ್ ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ಸಂಘಟಿಸುವಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಕೇಂದ್ರ ಗೃಹ ಸಚಿವಾಲಯ ತನ್ನ ಅಧಿಸೂಚನೆಯಲ್ಲಿ ವಿವರಿಸಿದೆ.
ಇದನ್ನೂ ಓದಿ: ಭಯೋತ್ಪಾದನೆ ಕಾಂಗ್ರೆಸ್‌ನ ಪಾಪದ ಕೂಸು; ಬಿಜೆಪಿ ಶಾಸಕ ಪಿ ರಾಜೀವ್ ಆರೋಪ