ಮುಂಬೈ: ಮೀರಾ ರೋಡ್‌ನಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಸಿದಂತೆ ಹೊಸ ಮಾಹಿತಿಯೊಂದು ಹೊರಬಿದ್ದಿದೆ. ಜೂನ್ 3 ರ ಮಧ್ಯರಾತ್ರಿ ಮೀರಾ ರಸ್ತೆಯ ಗೀತಾ ನಗರದ ಆಕಾಶದೀಪ್ ಕಟ್ಟಡದ ಕೊಠಡಿ ಸಂಖ್ಯೆ 704 ರಲ್ಲಿ ಸರಸ್ವತಿ ವೈದ್ಯ ಎಂಬುವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಮೂಲಗಳಿಂದ ಆಘಾತಕಾರಿ ಸಂಗತಿಯೊಂದು ಬಹಿರಂಗವಾಗಿದೆ.
ಮೀರಾ ರಸ್ತೆಯಲ್ಲಿ ನಡೆದ ಕೊಲೆ ಮಹಾರಾಷ್ಟ್ರ ಮಾತ್ರವಲ್ಲದೇ, ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ, ಕೇಸ್ಗೆ ಸಂಬಂಧಿಸಿದಂತೆ ಹೊಸ ಮಾಹಿತಿಯೊಂದು ಬಹಿರಂಗವಾಗಿದ್ದು, ಆರೋಪಿ ಮನೋಜ್ ಸಾನೆ ಸುಳ್ಳು ಮಾಹಿತಿ ನೀಡಿರುವುದು ತನಿಖೆಯಿಂದ ಬಯಲಾಗಿದೆ. ಬುಧವಾರ ಮಧ್ಯರಾತ್ರಿ ಮನೋಜ್ ಸಾನೆಯನ್ನು ಬಂಧಿಸಿದ ನಂತರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಿಯು ತಾನು ಮತ್ತು ಸರಸ್ವತಿ ಅನಾಥರು ಎಂದು ಹೇಳಿದ್ದ. ಆದರೆ, ಗುರುವಾರ ಸರಸ್ವತಿಯ ಮೂವರು ಸಹೋದರಿಯರು ಪೊಲೀಸರನ್ನು ಭೇಟಿಯಾಗಿದ್ದು, ಮನೋಜ್ ಸಾನೆ ಹೇಳಿಕೆ ಸುಳ್ಳು ಎಂದು ಸಾಬೀತಾಗಿದೆ. ಅಷ್ಟೇ ಅಲ್ಲದೆ, ಆಕೆಯ ನೆನಪಿಗಾಗಿ ದೇಹದ ಫೋಟೋವನ್ನು ತೆಗೆದುಕೊಂಡಿರುವುದು ತಿಳಿದು ಬಂದಿದೆ.
ಪೊಲೀಸರ ದಿಕ್ಕು ತಪ್ಪಿಸಲು ಯತ್ನ: ಇನ್ನು ಸರಸ್ವತಿಯ ಸಹೋದರಿಯರಿಗೆ ಪೊಲೀಸರು ವಿವರವಾದ ಮಾಹಿತಿ ನೀಡಿದಾಗ ಅವರು ನಿಜವಾಗಿಯೂ ಸರಸ್ವತಿಯ ಸಹೋದರಿಯರೇ ಎಂದು ಪರಿಶೀಲಿಸಿದರು. ಮೃತ ಸರಸ್ವತಿಗೆ ಐವರು ಸಹೋದರಿಯರಿದ್ದು, ಈ ಐವರಲ್ಲಿ ಸರಸ್ವತಿ ಕಿರಿಯವಳು. ಆದರೆ ಪೊಲೀಸ್ ವಿಚಾರಣೆ ವೇಳೆ ಸರಸ್ವತಿ ಅನಾಥೆ ಎಂದು ಮನೋಜ್ ಸಾನೆ ಹೇಳಿಕೊಂಡಿರುವುದು ಪೊಲೀಸರ ದಿಕ್ಕು ತಪ್ಪಿಸುವುದಕ್ಕೆ ಎಂದು ತಿಳಿದು ಬಂದಿದೆ.
ಈ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ ಆರೋಪಿ ಮನೋಜ್ ಕೂಡ ನನಗೆ ಸೋದರ ಸಂಬಂಧಿಗಳಿದ್ದು, ಅವರು ಮುಂಬೈನಲ್ಲಿದ್ದಾರೆ. ಈ ವಿಚಾರವನ್ನು ಅವರಿಗೆ ತಿಳಿಸಬೇಡಿ ಎಂದು ಪೊಲೀಸರಿಗೆ ಮನವಿ ಮಾಡಿದ್ದಾನೆ. ಇದರಿಂದ ಮನೋಜ್ ಮತ್ತು ಮೃತ ಮಹಿಳೆ ಅನಾಥರಲ್ಲ, ಸಂಬಂಧಿಕರಿದ್ದಾರೆಂದು ಸ್ಪಷ್ಟವಾಗಿದೆ. ಇನ್ನು ಸರಸ್ವತಿ ಸಹೋದರಿಯರು ಗುರುವಾರ ಪೊಲೀಸರನ್ನು ಭೇಟಿ ಮಾಡಿದ ನಂತರ ಮೃತ ದೇಹ ಹಸ್ತಾಂತರಿಸುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ ಪೊಲೀಸರು ಡಿಎನ್‌ಎ ಪರೀಕ್ಷೆ ನಡೆಸಿ, ಡಿಎನ್‌ಎ ಹೋಲಿಕೆ ಮಾಡಿ ಶವವನ್ನು ಹಸ್ತಾಂತರಿಸಲಿದ್ದಾರೆ.
ಇದನ್ನೂ ಓದಿ : ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯನ್ನ 13 ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಕ್ರೂರಿ
2013-14ರಲ್ಲಿ ಮನೋಜ್ ಭೇಟಿ : ಮೃತ ಸರಸ್ವತಿ ತನ್ನ ಸಹೋದರಿಯರೊಂದಿಗೆ ಅನಾಥಾಶ್ರಮದಲ್ಲಿದ್ದರು. 10ನೇ ತರಗತಿಯ ನಂತರ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದರು. ಬೋರಿವಲಿಯಲ್ಲಿ ಕೆಲಸ ಹುಡುಕುತ್ತಿದ್ದಾಗ ಮನೋಜ್ ಸಾನೆಯನ್ನು ಭೇಟಿಯಾದನು. ಈ ವೇಳೆ ಮನೋಜ್ ಕೆಲಸ ಕೊಡಿಸುವ ಭರವಸೆ ನೀಡಿದ್ದು, ನಂತರ ಇಬ್ಬರೂ ಸ್ನೇಹಿತರಾದರು. ಕೆಲವು ದಿನಗಳ ನಂತರ ಸರಸ್ವತಿಗೆ ಕೆಲಸ ಸಿಕ್ಕಿದ್ದು, ವಸತಿ ವ್ಯವಸ್ಥೆ ಇರಲಿಲ್ಲ. ಹೀಗಾಗಿ, ಮನೋಜ್ ನನ್ನ ಸ್ವಂತ 2 BHK ಮನೆಯಲ್ಲಿ ಇರುವಂತೆ ತಿಳಿಸಿದ್ದ. ಬಳಿಕ, ಇಬ್ಬರೂ ಎರಡು ವರ್ಷಗಳ ಕಾಲ ಒಟ್ಟಿಗೆ ವಾಸಿಸಿದ್ದಾರೆ. 2014 ರಲ್ಲಿ ಸ್ನೇಹ ಪ್ರೀತಿಗೆ ತಿರುಗಿತು. ಇಬ್ಬರೂ ದೇವಸ್ಥಾನದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ.
ಹೆಚ್‌ಐವಿ ಪಾಸಿಟಿವ್ ಎಂದು ಹೇಳಿಕೊಂಡ ಮನೋಜ್ : ಪೊಲೀಸ್ ತನಿಖೆಯಲ್ಲಿ ಮನೋಜ್ ಸಾನೆ ಸುಳ್ಳು ಹೇಳಿಕೆ ನೀಡುತ್ತಿರುವುದು ತಿಳಿದು ಬಂದಿದೆ. ತನಗೆ ಹೆಚ್‌ಐವಿ ಸೋಂಕು ತಗುಲಿದೆ ಎಂದು ಬುಧವಾರ ಪೊಲೀಸರಿಗೆ ಮನೋಜ್ ಹೇಳಿಕೆ ನೀಡಿದ್ದು, 2008 ರಿಂದ ಔಷಧ, ಮಾತ್ರೆ ಸೇವಿಸುತ್ತಿದ್ದೇನೆ ಎಂದು ತಿಳಿಸಿದ್ದ. ಬಳಿಕ ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಮನೋಜ್ ಹೇಳಿಕೆ ನಿಜವೋ ಸುಳ್ಳೋ ಎಂದು ಪೊಲೀಸರು ತಿಳಿಸಲು ನಿರಾಕರಿಸಿದ್ದಾರೆ.
ಇದನ್ನೂ ಓದಿ : Girlfriend Mother Murder: ಪ್ರೀತಿಗೆ ಅಡ್ಡಿ.. ಉದ್ಯಮಿ ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೈದ ಪಾಗಲ್ ಪ್ರೇಮಿ
ಮೇ 29 ರಿಂದ ಕೊಲೆಗೆ ಸಂಚು ರೂಪಿಸಿದ್ದ ಖದೀಮ : ಮನೋಜ್, ಬೋರಿವಲಿಯಲ್ಲಿ ಪಡಿತರ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದು, ಮೇ 29 ರಿಂದ ಕೆಲಸಕ್ಕೆ ಹೋಗಿರಲಿಲ್ಲ. ಅಂದಿನಿಂದ ಸರಸ್ವತಿಯನ್ನು ಕೊಲೆ ಮಾಡುವುದಕ್ಕೆ ಸಂಚು ರೂಪಿಸಿದ್ದ. ಗೂಗಲ್ನಲ್ಲಿ ಸರ್ಚ್ ಮಾಡಿ ಶವವನ್ನು ವಿಲೇವಾರಿ ಮಾಡುವುದು ಹೇಗೆ?, ಮೃತದೇಹದ ವಾಸನೆ ಬರದಂತೆ ಏನು ಮಾಡಬಹುದು ಎಂದು ನೋಡಿದ್ದಾನೆ. ಬಳಿಕ, ದೇಹವನ್ನು ತುಂಡು ಮಾಡಿ ಮೂರು ಬಕೆಟ್‌ಗಳಲ್ಲಿ ಬೇಯಿಸಿ ವಿಲೇವಾರಿ ಮಾಡಲು ಸಿದ್ಧಮಾಡಿ ಇಟ್ಟಿದ್ದ.