ನವದೆಹಲಿ:ಪಿಎನ್ಬಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ಉದ್ಯಮಿ ಮೆಹುಲ್ ಚೋಕ್ಸಿಗೆ ಡೊಮೆನಿಕಾ ಹೈಕೋರ್ಟ್ ಜಾಮೀನು ನಿರಾಕರಿಸಿದೆ. ಕೆರಿಬಿಯನ್ ದ್ವೀಪರಾಷ್ಟ್ರದ ಡೊಮಿನಿಕಾ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಕ್ಸಿಗೆ ಡೊಮಿನಿಕಾ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣದ ಆರೋಪಿಯಾಗಿರುವ ಚೋಕ್ಸಿ, ವಿದೇಶಕ್ಕೆ ಪರಾರಿಯಾಗಿ, 2018 ರಿಂದ ಕೆರಿಬಿಯನ್ ದ್ವೀಪರಾಷ್ಟ್ರ ಆಂಟಿಗುವಾ ಮತ್ತು ಬಾರ್ಬುಡಾದ ಪೌರತ್ವ ಪಡೆದು, ಅಲ್ಲಿಯೇ ನೆಲೆಸಿದ್ದರು. ಆಂಟಿಗುವಾದಿಂದ ಡೊಮಿನಿಕಾ ನಗರಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ:Mehul Choksi: ಮೆಹುಲ್ ಚೋಕ್ಸಿ 'ನಿಷೇಧಿತ ವಲಸಿಗ'- ಡೊಮಿನಿಕಾ ಘೋಷಣೆ
ಚೋಕ್ಸಿಗೆ ಜಾಮೀನು ನಿರಾಕರಿಸಿದ ಡೊಮಿನಿಕಾ ಹೈಕೋರ್ಟ್, ಚೋಕ್ಸಿ ದೇಶದಿಂದ ಪಲಾಯನ ಮಾಡುವ ಅಪಾಯವಿದೆ. ಈತ ಡೊಮಿನಿಕಾದೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ಅವರು ಡೊಮಿನಿಕಾ ತೊರೆಯುವುದನ್ನು ತಡೆಯಲು ನ್ಯಾಯಾಲಯ ಯಾವುದೇ ಷರತ್ತುಗಳನ್ನು ವಿಧಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದೆ.
ಕೆಳ ಹಂತದ ನ್ಯಾಯಾಲಯದಲ್ಲಿ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಚೋಕ್ಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಚೋಕ್ಸಿಯನ್ನು ಕರೆತರಲು ಕಾನೂನು ಕ್ರಮಗಳನ್ನು ಮುಂದುವರಿಸಿದ್ದೇವೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.