ಕೊಚ್ಚಿ (ಕೇರಳ): ಹೃದಯ ಕಸಿಗೊಳಗಾದ ಕೇರಳದ ಮಹಿಳೆಯೊಬ್ಬರು ದಶಕದ ನಂತರವೂ ಆರೋಗ್ಯಯುತ ಜೀವನ ನಡೆಸುತ್ತಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಸಿ ಮಾಡಲಾದ ಹೃದಯದೊಂದಿಗೆ ಅತಿ ಹೆಚ್ಚು ಕಾಲ ಬದುಕಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶನಿವಾರ ಹೃದಯ ದಾನಿಯ ಕುಟುಂಬಸ್ಥರು ಹಾಗೂ ಹೃದಯ ಕಸಿ ಮಾಡಿಸಿಕೊಂಡ ಮಹಿಳೆಯ ಕುಟುಂಬಸ್ಥರು ಒಟ್ಟಿಗೆ ಸರಿ ಹತ್ತನೇ ವರ್ಷಾಚರಣೆ ಮಾಡಿದರು.
ಎರ್ನಾಕುಲಂನ ಪಿರವಂ ಮೂಲದ 34 ವರ್ಷದ ಶ್ರುತಿ ಎಂಬವರಿಗೆ ಇಲ್ಲಿನ ಲಿಸಿ ಆಸ್ಪತ್ರೆಯಲ್ಲಿ 2013ರ ಆಗಸ್ಟ್ 13ರಂದು ಹೃದಯ ಕಸಿ ಮಾಡಲಾಗಿತ್ತು. ಅಲ್ಲಿಂದ ಕೊಟ್ಟಾಯಂ ಮೂಲದ ಲಾಲಿಚನ್ ಎಂಬವರ ಹೃದಯವು ಶ್ರುತಿ ಅವರಲ್ಲಿ ಮಿಡಿಯಲಾರಂಭಿಸಿ ಇದೀಗ ಹತ್ತು ವರ್ಷಗಳಾಗಿವೆ. ಹೀಗಾಗಿ ಆಸ್ಪತ್ರೆಯಲ್ಲಿ ಶ್ರುತಿ ಕುಟುಂಬ ಹಾಗೂ ಹೃದಯದಾನಿ ಲಾಲಿಚನ್ ಅವರ ಸಂಬಂಧಿಕರು ಒಂದಾಗಿ ಕೇಕ್ ಕತ್ತರಿಸಿದರು.
ಇದೇ ವೇಳೆ, ಲಾಲಿಚನ್ ಅವರ ಸಹೋದರಿ ಎಲ್ಸಮ್ಮ, ಶ್ರುತಿಯ ಎದೆಗೆ ಕಿವಿ ಇಟ್ಟು ಸಹೋದರನ ಹೃದಯ ಬಡಿತ ಕೇಳಿಸಿಕೊಂಡರು. ಈ ಸಂದರ್ಭದಲ್ಲಿ ಅಂದು ಶಸ್ತ್ರಚಿಕಿತ್ಸೆಯ ನೇತೃತ್ವ ವಹಿಸಿದ್ದ ಡಾ.ಜೋಸ್ ಚಾಕೊ ಪೆರಿಯಪ್ಪುರಂ ಹಾಗೂ ನಟಿ ಅನ್ನಾ ಬೆನ್ ಇದ್ದರು.
ಶಶೀಂದ್ರನ್ ಮತ್ತು ಶಾಂತಾ ದಂಪತಿಯ ಪುತ್ರಿಯಾದ ಶ್ರುತಿಯು ಹೃದಯ ಕಾಯಿಲೆಯಿಂದ ಬಳಲುತ್ತಿದ್ದರು. ಒಂಟಿ ಕಿಡ್ನಿಯೊಂದಿಗೆ ಇವರು ಜನಿಸಿದ್ದರು. 2013ರ ಆಗಸ್ಟ್ 13ರಂದು ಕೊಟ್ಟಾಯಂನ ವಾಜಪಿಲ್ಲಿ ಮೂಲದ ಜೋಸೆಫ್ ಮ್ಯಾಥ್ಯೂ (ಲಾಲಿಚನ್) ಅವರಿಗೆ ಮೆದುಳು ನಿಷ್ಕ್ರಿಯವಾಗಿದೆ ಎಂದು ಘೋಷಿಸಲಾಗಿತ್ತು. ಅಂತೆಯೇ, ಸಂಬಂಧಿಕರು ಅಂಗಾಂಗ ದಾನಕ್ಕೆ ನಿರ್ಧರಿಸಿದ್ದರು. ಅಂಗಾಂಗ ದಾನದ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ, ಕೊಟ್ಟಾಯಂನಿಂದ ಕೇವಲ ಒಂದು ಗಂಟೆಯೊಳಗೆ ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಲಿಸಿ ಆಸ್ಪತ್ರೆಗೆ ಪೊಲೀಸ್ ಬೆಂಗಾವಲಿನೊಂದಿಗೆ ಹೃದಯವನ್ನು ಸಾಗಿಸಲಾಗಿತ್ತು. ನಂತರ ಶ್ರುತಿಗೆ ಕಸಿ ಮಾಡಲಾಗಿತ್ತು. ಸದ್ಯ ಶ್ರುತಿ ತಮ್ಮ ಮನೆ ಬಳಿಯೇ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ.
''ಹೃದಯ ಕಸಿ ನಂತರ ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ. ನೆಮ್ಮದಿಯಿಂದ ಜೀವನ ಮುನ್ನಡೆಸುತ್ತಿದ್ದೇನೆ. ವೈದ್ಯರ ನಿರ್ದೇಶನದಂತೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ಮಾಡಿಸಲಾಗುತ್ತಿದೆ. ಆರಂಭದಲ್ಲಿ ಹೃದಯ ಕಸಿ ಬಗ್ಗೆ ನನಗೆ ದೊಡ್ಡ ಚಿಂತೆಯಾಗಿತ್ತು. ಕುಟುಂಬಸ್ಥರು ಬೆಂಬಲದೊಂದಿಗೆ ನಾನು ಒಪ್ಪಿಕೊಂಡಿದ್ದೆ. ಇದೀಗ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದೇ 10 ವರ್ಷಗಳನ್ನು ಪೂರೈಸಲು ಸಾಧ್ಯವಾಗಿದ್ದು ನನ್ನ ಅದೃಷ್ಟವೇ ಸರಿ. ನಾನು ಸದ್ಯ ಜನಸಂದಣಿ ಮತ್ತು ರೋಗಿಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತೇನೆ ಅಷ್ಟೇ'' ಎಂದು ಶ್ರುತಿ 'ಈಟಿವಿ ಭಾರತ್'ಗೆ ತಿಳಿಸಿದರು.
''ಹೃದಯ ಕಸಿ ಶಸ್ತ್ರಚಿಕಿತ್ಸೆಗೂ ಮುನ್ನ ಶ್ರುತಿ ಸಾಕಷ್ಟು ಸಂಕಟ ಎದುರಿಸುತ್ತಿದ್ದರು. ಉಬ್ಬಸ ಮತ್ತು ನಿದ್ರಾಹೀನತೆಯಂತಹ ಅನೇಕ ಆರೋಗ್ಯ ಸಮಸ್ಯೆಗಳಿದ್ದವು. ಆಕೆಯ 17ನೇ ವಯಸ್ಸಿನಲ್ಲಿ ಹೃದಯದ ಸಮಸ್ಯೆಯನ್ನು ಗುರುತಿಸಲಾಯಿತು. ಆ ಸಮಯದಲ್ಲಿ ಆಂಜಿಯೋಪ್ಲಾಸ್ಟಿ ಮಾಡಲಾಗಿತ್ತು. ಆದರೆ, ಶ್ರುತಿ ಚೇತರಿಸಿಕೊಳ್ಳಲಿಲ್ಲ. ನಂತರ, ಡಾ.ಜೋಸ್ ಚಾಕೊ ಪೆರಿಯಪ್ಪುರಂ ಹೃದಯ ಕಸಿಯೇ ಇದಕ್ಕೆ ಪರಿಹಾರ ತಿಳಿಸಿದ್ದರು'' ಎಂದು ಕುಟುಂಬ ಸದಸ್ಯರು ಸ್ಮರಿಸಿದರು.
ಇದನ್ನೂ ಓದಿ: Heart Transplant Day: ಯುವ ಜನತೆಯಲ್ಲಿ ಕಾಡುತ್ತಿರುವ ಹೃದಯ ಸಮಸ್ಯೆ; ಹೃದಯ ಕಸಿ ಚಿಕಿತ್ಸೆ ಬಗ್ಗೆ ಮೂಡಿಸಬೇಕಿದೆ ಜಾಗೃತಿ