ಚಂಡೀಗಢ(ಹರಿಯಾಣ): ಹೆಣ್ಮಕ್ಕಳು ಅಂದ್ರೆ ಕೆಲವರಿಗೆ ಒಂಥರಾ ಅಸಡ್ಡೆ ಭಾವನೆ. ಮದುವೆಯಾಗಿ ಗಂಡನ ಮನೆ ಸೇರುವವರಿಗೆ ನಾವೇಕೆ ಹೆಚ್ಚಾಗಿ ಓದಿಸಬೇಕು, ಅವಳಿಗೆ ಕೆಲಸ ಸಿಕ್ಕರೆ ನಮ್ಮನ್ನು ಸಾಕುತ್ತಾಳಾ? ಅವಳ ಗಂಡನ ಮನೆಯವರಿಗೆ ತಾನೆ ಅನುಕೂಲ. ಹೀಗೆ ಒಂದಾ, ಎರಡಾ ಹೆಣ್ಣಿನ ಸಾಧನೆ ಮನೋಭಾವವನ್ನು ಕುಗ್ಗಿಸುವ ಮಾತುಗಳು.
ಆದ್ರೆ, ಇಲ್ಲೊಬ್ಬ ತಂದೆ ತುಂಬಾ ಡಿಫರೆಂಟ್. ತಮ್ಮ ಹೆಣ್ಣು ಮಕ್ಕಳ ಮೂಲಕವೇ ತಮ್ಮ ಕನಸನ್ನು ನನಸಾಗಿಸಿಕೊಂಡ ವ್ಯಕ್ತಿ. ಅವರೇ ದ್ರೋಣಾಚಾರ್ಯ ಪುರಸ್ಕೃತ ಮಹಾವೀರ್ ಸಿಂಗ್ ಫೋಗಟ್. ಇಡೀ ಜೀವಮಾನವನ್ನು ತಮ್ಮ ಹೆಣ್ಮಕ್ಕಳ ಏಳ್ಗೆಗಾಗಿಯೇ ಮುಡುಪಾಗಿಟ್ಟವರು.
![ಸಹೋದರಿಯರು](https://etvbharatimages.akamaized.net/etvbharat/prod-images/12201780_thu.jpg)
ಮಹಾವೀರ್ ಸಿಂಗ್ ಫೋಗಟ್ ಯಾರು?
ಫೋಗಟ್, ಕುಸ್ತಿಪಟು ಮತ್ತು ಹಿರಿಯ ಒಲಿಂಪಿಕ್ಸ್ ತರಬೇತುದಾರ. ಹರಿಯಾಣದ ಚಾರ್ಖಿ ದಾದ್ರಿ ಜಿಲ್ಲೆಯ ಬಾಲಾಲಿ ಮೂಲದವರು. ಇವರ ಪತ್ನಿ ದಯಾ ಶೋಭಾ ಕೌರ್. ಈ ದಂಪತಿಗೆ ಗೀತಾ, ಬಬಿತಾ, ರಿತು, ಸಂಗೀತಾ ಎಂಬ ಮುದ್ದಾದ ನಾಲ್ವರು ಹೆಣ್ಣುಮಕ್ಕಳಿದ್ದಾರೆ. ಅಲ್ಲದೆ, ಭೂವಿವಾದದಲ್ಲಿ ಕೊಲ್ಲಲ್ಪಟ್ಟ ತನ್ನ ಸಹೋದರನ ಮಕ್ಕಳಾದ ವಿನೇಶ್ ಮತ್ತು ಪ್ರಿಯಾಂಕಳನ್ನೂ ಇವರೇ ನೋಡಿಕೊಳ್ಳುತ್ತಿದ್ದಾರೆ.
ಸಂಪ್ರದಾಯಕ್ಕೆ ಸೆಡ್ಡು ಹೊಡೆದ ಮಹಾವೀರ್..!
ಇತರೆ ರಾಜ್ಯಗಳಿಗೆ ಹೋಲಿಸಿದರೆ ಹರಿಯಾಣದಲ್ಲಿ ಸಂಪ್ರದಾಯವಾದಿಗಳು ಹೆಚ್ಚು. ಹೆಣ್ಣುಮಕ್ಕಳೆಂದರೆ ಹೀಗೆ ಇರಬೇಕೆಂಬ ಕಟ್ಟುನಿಟ್ಟಿನ ನಿರ್ಬಂಧಗಳ ಮಧ್ಯೆ ಕುಸ್ತಿಪಟುವಾದ ಮಹಾವೀರ್, ತಮ್ಮ ಹೆಣ್ಣುಮಕ್ಕಳಿಗೂ ತರಬೇತಿ ನೀಡಿದರು. ಗೀತಾ, ಬಬಿತಾ ಸೋನಿಪತ್ನಲ್ಲಿರುವ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
![ತಂದೆಯೊಂದಿಗೆ ಮಕ್ಕಳು](https://etvbharatimages.akamaized.net/etvbharat/prod-images/12201780_thu-2.jpg)
ಅಪ್ಪನ ಆಸೆ ಈಡೇರಿಸಿದ ಮಕ್ಕಳು!
ಫೋಗಟ್, ತನ್ನ ಮಕ್ಕಳಿಗೆ ಯಾವತ್ತೂ ಇಂಥದ್ದೇ ಕಲಿಯಿರಿ ಎಂದು ಒತ್ತಾಯಿಸಿಲ್ಲ. ಆದರೂ, ಎಲ್ಲರೂ ತನ್ನ ತಂದೆಯ ಇಚ್ಛೆಯಂತೆಯೇ ಬದುಕಿದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಬಿತಾ ಮತ್ತು ವಿನೇಶ್ ವಿವಿಧ ತೂಕದ ವಿಭಾಗಗಳಲ್ಲಿ ಚಿನ್ನದ ಪದಕ ಗೆದ್ದರೆ, ಪ್ರಿಯಾಂಕಾ ಫೋಗಟ್ ಏಷ್ಯನ್ ಚಾಂಪಿಯನ್ ಶಿಪ್ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿದ್ದಾರೆ. ರಿತು, ರಾಷ್ಟ್ರಮಟ್ಟದಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದು, ಸಂಗೀತಾ ಅಂತಾರಾಷ್ಟ್ರೀಯ ಚಾಂಪಿಯನ್ ಶಿಪ್ನಲ್ಲಿ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಸಾಧನೆಯ ಹಿಂದಿದೆ ತಂದೆಯ ಪರಿಶ್ರಮ!
ಫೋಗಟ್ ಸಹೋದರಿಯರು ಹರಿಯಾಣಕ್ಕೆ ಮಾತ್ರವಲ್ಲದೆ ಇಡೀ ದೇಶದ ಕೀರ್ತಿ ಪತಾಕೆಯನ್ನು ವಿದೇಶಗಳಲ್ಲೂ ಹಾರಿಸಿದ್ದಾರೆ. ಹುಡುಗರಿಗಿಂತ, ನಾವೇನು ಕಮ್ಮಿಯಿಲ್ಲ ಎಂಬ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ. ಇವರ ಸಾಧನೆಯ ಹಿಂದೆ ಮಹಾವೀರ್ ಸಿಂಗ್ ಫೋಗಟ್ ಎಂಬ ಮಹಾನ್ ಶಕ್ತಿಯಿದೆ ಅನ್ನೋದು ಇಲ್ಲಿ ಗಮನಿಸಬೇಕಾದ ಸಂಗತಿ.