ಹೈದರಾಬಾದ್(ತೆಲಂಗಾಣ): ಹಿರಿಯ ವಿದ್ಯಾರ್ಥಿಯ ರ‍್ಯಾಗಿಂಗ್ ಕಿರುಕುಳ ತಾಳಲಾರದೆ ವೈದ್ಯಕೀಯ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತೆಲಂಗಾಣದಲ್ಲಿ ನಡೆದಿದೆ. ವಿಷಕಾರಿ ಚುಚ್ಚುಮದ್ದು ಚುಚ್ಚಿಕೊಂಡಿರುವ ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಹೈದರಾಬಾದ್‌ನ ನಿಮ್ಸ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ.
ಹೈದರಾಬಾದ್‌ನ ಬೋಡುಪ್ಪಲ್ ಪ್ರದೇಶದ ನಿವಾಸಿಯಾಗಿರುವ ಈಕೆ ಎಂಬಿಬಿಎಸ್ ಮುಗಿಸಿ ವಾರಂಗಲ್ ಕೆಎಂಸಿಯಲ್ಲಿ ಅನಸ್ತೇಶಿಯಾ ವಿಭಾಗದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಕಾಲೇಜು ಸೇರಿದ್ದರು. ಅಂದಿನಿಂದ ಹಿರಿಯ ವಿದ್ಯಾರ್ಥಿ ಸೈಫ್ ಎಂಬಾತ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಕೆಲ ದಿನಗಳ ಹಿಂದಷ್ಟೇ ಪೋಷಕರಿಗೆ ಮಾಹಿತಿ ನೀಡಿದ್ದಳಂತೆ.
ಬುಧವಾರ ಕಾಲೇಜು ಆಸ್ಪತ್ರೆಯ ವಾರ್ಡ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಲ್ಲಿಗೆ ಬಂದ ಹಿರಿಯ ವಿದ್ಯಾರ್ಥಿ ರ‍್ಯಾಗಿಂಗ್ ಮಾಡಿ ಹೀಯಾಳಿಸಿದ್ದಾನೆ. ಇದರಿಂದ ನೊಂದ ಪ್ರೀತಿ ಆಸ್ಪತ್ರೆ ಕೋಣೆಯೊಂದರಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪ್ರಜ್ಞೆ ತಪ್ಪಿ ಬಿದ್ದಿದ್ದ ವಿದ್ಯಾರ್ಥಿನಿಯನ್ನು ಅಲ್ಲಿದ್ದ ವಿದ್ಯಾರ್ಥಿಗಳು ಗಮನಿಸಿ ತಕ್ಷಣ ಆಕೆಯನ್ನು ವರಂಗಲ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿದ್ಯಾರ್ಥಿನಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ರವಾನಿಸಲಾಗಿದೆ. ಸಂತ್ರಸ್ತೆ ಯಾವ ಇಂಜೆಕ್ಷನ್ ತೆಗೆದುಕೊಂಡಿದ್ದಾಳೆ ಎಂಬುದನ್ನು ತಿಳಿಯಲು ಆಕೆಯ ರಕ್ತದ ಮಾದರಿ ಸಂಗ್ರಹಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ವಿಷಯ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪ್ರೀತಿಯನ್ನು ಕಾಪಾಡಲು ವೈದ್ಯರು ಪ್ರಯತ್ನಿಸುತ್ತಿದ್ದಾರೆ. ಆಕೆಯ ದೇಹಸ್ಥಿತಿ ವಿಷಮಯವಾಗುತ್ತಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ ತನ್ನ ಮಗಳ ಈ ಪರಿಸ್ಥಿತಿಗೆ ಕಾರಣವಾದ ವಿದ್ಯಾರ್ಥಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಕೆಯ ಪೋಷಕರು ಒತ್ತಾಯಿಸಿದ್ದಾರೆ. ಸೈಫ್ ಕಿರುಕುಳ ನೀಡುತ್ತಿದ್ದ ಬಗ್ಗೆ ಮಗಳ ನನ್ನ ಬಳಿ ಹೇಳಿಕೊಂಡಿದ್ದಳು. ಈ ಬಗ್ಗೆ ಕಾಲೇಜು ಆಡಳಿತ ಮಂಡಳಿಗೂ ದೂರು ನೀಡಿದರೂ ಗಮನ ಹರಿಸಿಲ್ಲ ಎನ್ನುತ್ತಾರೆ. ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ವಿಚಾರವನ್ನೂ ಕಾಲೇಜು ಆಡಳಿತ ಮಂಡಳಿ ನಮಗೆ ಕರೆ ತಿಳಿಸಿಲ್ಲ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಘಟನೆ ಸಂಬಂಧ ವರಂಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಉನ್ನತ ತನಿಖೆಗೆ ಮಾಜಿ ಸಚಿವ ಒತ್ತಾಯ: ಇನ್ನು, ಘಟನೆಗೆ ಸಂಬಂಧಿಸಿದಂತೆ ಆತಂಕ ವ್ಯಕ್ತಪಡಿಸಿರುವ ಮಾಜಿ ಸಚಿವೆ ಕೊಂಡ ಸುರೇಖಾ ಅವರು, ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ನಡೆಸಬೇಕು. ಕಾಲೇಜುಗಳಲ್ಲಿ ರ‍್ಯಾಗಿಂಗ್ ತಡೆಯಬೇಕು. ವೈದ್ಯ ಪದವಿ ಓದಲು ಬರುವ ಬಡಮಕ್ಕಳ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆಯನ್ನು ನಿಯಂತ್ರಿಸಬೇಕಿದೆ. ಅಂಥವರ ವಿರುದ್ಧ ಕಠಿಣ ಶಿಕ್ಷೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರ್ಯಾಗಿಂಗ್ನಿಂದಾಗಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಯತ್ನಿಸಿದ ವಿಷಯ ತಿಳಿದು ಅವರು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರೊಂದಿಗೆ ವಿದ್ಯಾರ್ಥಿನಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಚಿಕಿತ್ಸೆಗಾಗಿ ಹೈದರಾಬಾದ್‌ಗೆ ಕಳಿಸಲಾಗಿದೆ ಎಂದು ವೈದ್ಯರು ತಿಳಿಸಿದರು.
ಓದಿ: ಕೊರೊನಾಗೆ ಹೆದರಿ 3 ವರ್ಷದಿಂದ ಮನೆಯಲ್ಲೇ ಲಾಕ್ ಆಗಿದ್ದ ತಾಯಿ, ಮಗು ರಕ್ಷಣೆ