ನವದೆಹಲಿ: ಮಾಧ್ಯಮಗಳು ಪ್ರಾಮಾಣಿಕ ವರದಿಗಾರಿಕೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕು ಹಾಗೂ ವರದಿಗಾರಿಕೆಯನ್ನು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವ ಮತ್ತು ವ್ಯಾಪಾರ ವಿಸ್ತರಿಸುವ ಅಸ್ತ್ರವನ್ನಾಗಿ ಬಳಕೆ ಮಾಡಬಾರದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮಂಗಳವಾರ ಹೇಳಿದ್ದಾರೆ.
ಸಾಹಿತಿ ಗುಲಾಬ್ ಚಂದ್ ಕೋಠಾರಿಯವರ 'ದಿ ಗೀತಾ ವಿಜ್ಞಾನ ಉಪನಿಷದ್' ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ವ್ಯಾಪಾರ ಹಿತಾಸಕ್ತಿಗಳನ್ನು ಹೊಂದಿರುವ ಮಾಧ್ಯಮ ಸಂಸ್ಥೆಯೊಂದು ಬಾಹ್ಯ ಒತ್ತಡಗಳಿಗೆ ಗುರಿಯಾಗುವುದರಿಂದ, ಸ್ವತಂತ್ರ ಪತ್ರಿಕೋದ್ಯಮದ ಮೇಲೆ ವ್ಯಾಪಾರಿ ಹಿತಾಸಕ್ತಿಗಳು ಮೇಲುಗೈ ಸಾಧಿಸಿ, ಪ್ರಜಾಪ್ರಭುತ್ವದ ಆಶಯಗಳಿಗೆ ಹಿನ್ನಡೆಯಾಗುತ್ತದೆ ಎಂದು ರಮಣ ತಿಳಿಸಿದರು.
ಸ್ವತಂತ್ರ ಪತ್ರಿಕೋದ್ಯಮವು ಪ್ರಜಾಪ್ರಭುತ್ವದ ಅಡಿಪಾಯವಾಗಿರುವುದನ್ನು ಒತ್ತಿ ಹೇಳಿದ ಒಂದು ಕಾಲದ ಪತ್ರಕರ್ತ ಹಾಗೂ ಹಾಲಿ ಭಾರತದ ಮುಖ್ಯ ನ್ಯಾಯಮೂರ್ತಿ ರಮಣ, ಅಂತಾರಾಷ್ಟ್ರೀಯ ಮಾನದಂಡಗಳಿಗೆ ಹೋಲಿಸಿದರೆ ಭಾರತದ ಪತ್ರಿಕೋದ್ಯಮವು ಕೆಳಮಟ್ಟದಲ್ಲಿರುವುದು ಯಾಕೆ ಎಂಬುದನ್ನು ಈ ಕ್ಷೇತ್ರದೊಳಗಿರುವವರು ಚಿಂತನೆ ನಡೆಸಬೇಕಿದೆ ಎಂದು ಕಿವಿಮಾತು ಹೇಳಿದರು.
"ಪತ್ರಕರ್ತರು ಜನಸಾಮಾನ್ಯರ ಕಿವಿ ಮತ್ತು ಕಣ್ಣುಗಳಿದ್ದಂತೆ. ವಾಸ್ತವಗಳನ್ನು ತಿಳಿಸುವುದು ಮಾಧ್ಯಮಗಳ ಕರ್ತವ್ಯ. ಈಗಲೂ ಭಾರತೀಯ ಸಮಾಜದಲ್ಲಿ ಪ್ರಿಂಟ್ ಆಗಿರುವುದೆಲ್ಲ ಸತ್ಯ ಎಂದು ನಂಬಲಾಗುತ್ತದೆ. ಮಾಧ್ಯಮಗಳು ಪ್ರಾಮಾಣಿಕ ವರದಿಗಾರಿಕೆಗೆ ಮಾತ್ರ ತಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕು ಹಾಗೂ ವರದಿಗಾರಿಕೆಯನ್ನು ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವ ಮತ್ತು ವ್ಯಾಪಾರ ವಿಸ್ತರಿಸುವ ಅಸ್ತ್ರವನ್ನಾಗಿ ಬಳಕೆ ಮಾಡಬಾರದು" ಎಂದು ಅವರು ಹೇಳಿದರು.
ಭಾರತದಲ್ಲಿ ಪತ್ರಕರ್ತರಿಗೆ ಸಾಂಸ್ಥಿಕ ಬೆಂಬಲ ಇಲ್ಲ ಎಂಬುದನ್ನು ಪ್ರಸ್ತಾಪಿಸಿದ ಮುಖ್ಯ ನ್ಯಾಯಮೂರ್ತಿಗಳು, ಪುಲಿಟ್ಜರ್ ಅಥವಾ ಪುಲಿಟ್ಜರ್ ಪ್ರಶಸ್ತಿ ಪಡೆದ ಪತ್ರಕರ್ತರಿಗೆ ಹೋಲಿಸುವಂಥ ಸನ್ಮಾನ ವ್ಯವಸ್ಥೆಗಳೂ ಭಾರತದಲ್ಲಿ ಇಲ್ಲ ಎಂದು ನುಡಿದರು.