ಫಿರೋಜಾಬಾದ್(ಉತ್ತರ ಪ್ರದೇಶ): ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫಿರೋಜಾಬಾದ್ ಜಿಲ್ಲೆಯ ಸ್ವಾಯತ್ತ ರಾಜ್ಯ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ನಡೆದಿದೆ. ನಗರದ ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಕೌಶಲ್ಯ ನಗರದ ನಿವಾಸಿ ಶೈಲೇಂದ್ರ ಶಂಖ್ವಾರ್ (21) ಮೃತಪಟ್ಟಿದ್ದಾರೆ.
ಶೈಲೇಂದ್ರರಿಗೆ ಶನಿವಾರ ಪರೀಕ್ಷೆ ಇತ್ತು. ಆದ್ರೆ ಪರೀಕ್ಷಾ ಕೊಠಡಿಗೆ ಬಾರದೇ ಇದ್ದ ಕಾರಣ ಕಾಲೇಜು ಸಿಬ್ಬಂದಿ ಹಾಸ್ಟೆಲ್ ಕೋಣೆಗೆ ಹೋಗಿ ನೋಡಿದ್ದಾರೆ. ಈ ವೇಳೆ ಒಳಗಿನಿಂದ ರೂಮ್ ಲಾಕ್ ಆಗಿರುವುದು ತಿಳಿದು ಬಂದಿದೆ. ಸಿಬ್ಬಂದಿ ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿ ಸೀಲಿಂಗ್ ಫ್ಯಾನ್ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ತಕ್ಷಣ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಫಿರೋಜಾಬಾದ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸರ್ವೇಶ್ ಕುಮಾರ್ ಮಿಶ್ರಾ ತಿಳಿಸಿದರು.
ಇದನ್ನೂ ಓದಿ: ನೇಣು ಬಿಗಿದುಕೊಂಡು ಕೇಂದ್ರ ಸಚಿವರ ಸೋದರಳಿಯ ಆತ್ಮಹತ್ಯೆ
ಕಾಲೇಜು ಆಡಳಿತ ಮಂಡಳಿಯು ತನ್ನ ಮಗನಿಗೆ ಚಿತ್ರಹಿಂಸೆ ನೀಡುತ್ತಿತ್ತು ಎಂದು ಆರೋಪಿಸಿ ಮೃತ ವಿದ್ಯಾರ್ಥಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಹೋಟೆಲ್ ಉದ್ಯಮಿ ಆತ್ಮಹತ್ಯೆ ಪ್ರಕರಣ: ಐಪಿಎಸ್ ಅಧಿಕಾರಿ ಆತ್ಮಹತ್ಯೆ ಪ್ರಕರಣದಲ್ಲಿ ಭಾಗಿ
ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಫಿರೋಜಾಬಾದ್ ಜಿಲ್ಲಾಸ್ಪತ್ರೆಯ ಮುಂಭಾಗ ಜಮಾಯಿಸಿದ ಅನೇಕ ವಿದ್ಯಾರ್ಥಿಗಳು ಕಾಲೇಜು ಪ್ರಾಂಶುಪಾಲರು ಮತ್ತು ಹಾಸ್ಟೆಲ್ ವಾರ್ಡನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸುಮಾರು ನಾಲ್ಕು ಗಂಟೆಗಳ ಕಾಲ ಹೆದ್ದಾರಿ ತಡೆ ನಡೆಸಿದರು. ಬಳಿಕ ಪೊಲೀಸ್ ಅಧಿಕಾರಿಗಳು ವಿದ್ಯಾರ್ಥಿಗಳ ಮನವೊಲಿಸಿ, ಹೆದ್ದಾರಿ ತೆರವುಗೊಳಿಸಿದ್ದಾರೆ.