ನವದೆಹಲಿ: ಈಗಾಗಲೇ ಪೆಟ್ರೋಲ್, ಡೀಸೆಲ್ ಹಾಗು ಅಡುಗೆ ಅನಿಲ ಬೆಲೆ ಏರಿಕೆಯಿಂದ ಜನ ಕಂಗೆಟ್ಟಿದ್ದಾರೆ. ಈ ಬೆನ್ನಲ್ಲೇ ಇದೀಗ ಸತತ 14 ವರ್ಷಗಳ ನಂತರ ಬೆಂಕಿ ಪೊಟ್ಟಣದ ಬೆಲೆ ಏರಿಕೆ ಮಾಡಲಾಗಿದ್ದು, ಡಿಸೆಂಬರ್ 1ರಿಂದ ಬೆಂಕಿಪೊಟ್ಟಣದ ಬೆಲೆ ದುಪ್ಪಟ್ಟಾಗಲಿದೆ.
2007ರಲ್ಲಿ 50 ಪೈಸೆಯಿದ್ದ ಒಂದು ಬೆಂಕಿ ಪೆಟ್ಟಿಗೆ ಬೆಲೆಯನ್ನು 1ರೂ.ಗೆ ಹೆಚ್ಚಳ ಮಾಡಲಾಗಿತ್ತು. ಇದೀಗ ಹಣದುಬ್ಬರ ಹೆಚ್ಚುತ್ತಿರುವ ಕಾರಣ ಡಿಸೆಂಬರ್ 1, 2021 ರಿಂದ 1ರೂ. ಇದ್ದ ಮ್ಯಾಚ್‌ಬಾಕ್ಸ್ ಮಾರಾಟದ ಬೆಲೆಯನ್ನು 2 ರೂ.ಗಳಿಗೆ ಏರಿಕೆ ಮಾಡಲಾಗುತ್ತಿದೆ ಎಂದು ಬೆಂಕಿ ಪೊಟ್ಟಣ ತಯಾರಕರು ತಿಳಿಸಿದ್ದಾರೆ.
ಬೆಂಕಿಕಡ್ಡಿ ಬೆಲೆ ಏರಿಕೆಗೆ ಕಾರಣವೇನು?:
ಬೆಂಕಿಕಡ್ಡಿಗಳನ್ನು ತಯಾರಿಸಲು 14 ಬಗೆಯ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ. ಒಂದು ಕೆಜಿ ಕೆಂಪು ರಂಜಕ ರೂ. 425 ರಿಂದ ರೂ. 810 ಕ್ಕೆ, ಮೇಣ ರೂ. 58 ರಿಂದ ರೂ. 80 ಕ್ಕೆ, ಹೊರ ಬಾಕ್ಸ್ ಬೋರ್ಡ್ ರೂ. 36 ರಿಂದ ರೂ. 55 ಕ್ಕೆ ಮತ್ತು ಒಳ ಪೆಟ್ಟಿಗೆ ಬೋರ್ಡ್ ರೂ. 32 ರಿಂದ ರೂ. 58 ಕ್ಕೆ ಏರಿಕೆಯಾಗಿದೆ. ಅಕ್ಟೋಬರ್ 10 ರಿಂದ ಪೇಪರ್, ಪೊಟ್ಯಾಶಿಯಂ ಕ್ಲೋರೈಟ್ ಮತ್ತು ಸಲ್ಫರ್ ಬೆಲೆಯೂ ಹೆಚ್ಚಾಗಿದೆ. ಡೀಸೆಲ್ ಬೆಲೆ ಏರಿಕೆಯಿಂದ ಉದ್ಯಮದ ಮೇಲೆ ಹೆಚ್ಚುವರಿ ಹೊರೆ ಬೀಳುತ್ತಿದೆ. ಹೀಗಾಗಿ ಬೆಂಕಿಪೊಟ್ಟಣ ತಯಾರಕರು ಬೆಲೆ ಏರಿಕೆ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ಮೊಟ್ಟಮೊದಲ ಬಾರಿಗೆ ಮ್ಯಾಚ್ ಬಾಕ್ಸ್ ಫ್ಯಾಕ್ಟರಿಗಳನ್ನು 1922 ರಲ್ಲಿ ಶಿವಕಾಶಿ ಪಟ್ಟಣದಲ್ಲಿ ಅಯ್ಯ ನಾಡರ್ ಮತ್ತು ಷಣ್ಮುಗ ನಾಡರ್ ಎಂಬ ಇಬ್ಬರು ವ್ಯಕ್ತಿಗಳು ಸ್ಥಾಪಿಸಿದರು. ಪ್ರಸ್ತುತ ದೇಶಾದ್ಯಂತ ಬೆಂಕಿಕಡ್ಡಿಗಳ ಪ್ರಮುಖ ಪೂರೈಕೆದಾರ ಮತ್ತು ರಫ್ತುದಾರನಾಗಿ ತಮಿಳುನಾಡು ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದಲ್ಲಿ ಸುಮಾರು 320 ಉತ್ಪಾದನಾ ಕಂಪನಿಗಳಿದ್ದು, ಆಂತರಿಕವಾಗಿ ಮತ್ತು ಬಾಹ್ಯವಾಗಿ 4 ಲಕ್ಷಕ್ಕೂ ಹೆಚ್ಚು ಮಂದಿ ಇಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಇದರಲ್ಲಿ ಶೇ 90 ಮಹಿಳಾ ಉದ್ಯೋಗಿಗಳಿದ್ದಾರೆ.