ಮುಂಬೈ (ಮಹಾರಾಷ್ಟ್ರ): ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿಯಲ್ಲಿ ಒಂದು ಹುದ್ದೆಯನ್ನು ತೃತೀಯ ಲಿಂಗಿಗೆ ಮೀಸಲಿಡುವಂತೆ ಮಹಾರಾಷ್ಟ್ರದ ಆಡಳಿತಾತ್ಮಕ ನ್ಯಾಯ ಮಂಡಳಿಯು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಪಿಎಸ್‌ಐ ಹುದ್ದೆಗೆ ತೃತೀಯ ಲಿಂಗಿ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲು ಮಹಾರಾಷ್ಟ್ರ ಲೋಕಸೇವಾ ಆಯೋಗಕ್ಕೆ (ಎಂಪಿಎಸ್‌ಸಿ) ನಿರ್ದೇಶನ ನೀಡುವಂತೆ ಕೋರಿ ತೃತೀಯ ಲಿಂಗಿ ವಿನಾಯಕ್ ಕಾಶಿದ್ ಎಂಬುವುದು ಸಲ್ಲಿಸಿದ್ದ ಅರ್ಜಿಯನ್ನು ಆಡಳಿತಾತ್ಮಕ ನ್ಯಾಯ ಮಂಡಳಿಯ ಮುಂಬೈ ಪೀಠ ವಿಚಾರಣೆ ನಡೆಸಿದೆ. ಈ ವೇಳೆ, ರಾಜ್ಯಗಳಲ್ಲಿ ಎಲ್ಲ ಸಾರ್ವಜನಿಕ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಕುರಿತ ಸುಪ್ರೀಂ ಕೋರ್ಟ್ನ 2014ರ ತೀರ್ಪಿನ ಆಧಾರದ ಮೇಲೆ ಆಡಳಿತಾತ್ಮಕ ನ್ಯಾಯ ಆದೇಶ ಮಾಡಿದೆ.
ಇದೇ ಜೂನ್ನಲ್ಲಿ ಎಂಪಿಎಸ್‌ಸಿ 800 ಪಿಎಸ್‌ಐ ಹುದ್ದೆಗಳಿಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಈ ಹುದ್ದೆಗಳಲ್ಲಿ ತೃತೀಯಲಿಂಗಿಗಳಿಗೂ ಮೀಸಲಾತಿ ನೀಡಬೇಕೆಂದು ವಿನಾಯಕ್ ಕಾಶಿದ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ಪ್ರಕಾರ ಕಾಶಿದ್ ಹುಟ್ಟಿನಿಂದ ಗಂಡಾಗಿದ್ದು, ನಂತರ ಹೆಣ್ಣಾಗಿ ಪರಿವರ್ತನೆಗೊಂಡಿದ್ದರು.
ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಿದ್ದ ಕಾಶಿದ್, ತನ್ನನ್ನು ಮಹಿಳಾ ಅಭ್ಯರ್ಥಿ ಎಂದು ಪರಿಗಣಿಸುವಂತೆ ಕೋರಿದ್ದರು. ಒಬ್ಬರು ಮಾತ್ರ ಈ ನ್ಯಾಯ ಮಂಡಳಿಯ ಮೊರೆ ಹೋಗಿದ್ದರಿಂದ ಒಂದು ಹುದ್ದೆ ಕಾಯ್ದಿರಿಸುವಂತೆ ನ್ಯಾಯಮಂಡಳಿ ಹೇಳಿದೆ.
ಈ ಹಿಂದೆ ಆಗಸ್ಟ್‌ನಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಕಚೇರಿಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ ಒದಗಿಸುವ ಬಗ್ಗೆ ಆರು ತಿಂಗಳಲ್ಲಿ ನೀತಿ ರೂಪಿಸುವಂತೆ ಮಹಾರಾಷ್ಟ್ರ ಸರ್ಕಾರಕ್ಕೆ ನ್ಯಾಯಮಂಡಳಿ ಸೂಚಿಸಿತ್ತು. ಈ ಅರ್ಜಿ ವಿಚಾರಣೆ ವೇಳೆ ತೃತೀಯ ಲಿಂಗಿಗಳಿಗೆ ಮೀಸಲು ನೀತಿಯನ್ನು ರೂಪಿಸುವ ಬಗ್ಗೆ ಸರ್ಕಾರ ಇನ್ನೂ ಯೋಚಿಸುತ್ತಿದೆ ಎಂದು ರಾಜ್ಯ ಸರ್ಕಾರದ ವಕೀಲರು ನ್ಯಾಯಮಂಡಳಿಗೆ ತಿಳಿಸಿದರು.
ಇದರಿಂದ ಕೆರಳಿದ ನ್ಯಾಯಮಂಡಳಿಯು ದೇಶದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಸರ್ಕಾರ ಅನುಸರಿಸಬೇಕು. ಎಲ್ಲ ತೃತೀಯ ಲಿಂಗಿಗಳು ತಮ್ಮ ಸ್ವಯಂ-ಗುರುತಿಸಲ್ಪಟ್ಟ ಲಿಂಗವನ್ನು ನಿರ್ಧರಿಸುವ ಹಕ್ಕು ಹೊಂದಿದ್ದಾರೆ. ಇಲ್ಲಿಯವರೆಗೆ ಮೀಸಲಾತಿ ನೀತಿ ನಿರ್ಧಾರ ಕೈಗೊಂಡಿಲ್ಲ ಎಂಬ ರಾಜ್ಯ ಸರ್ಕಾರದ ನಿಲುವನ್ನು ಒಪ್ಪಿಕೊಳ್ಳುವುದು ಕಷ್ಟ ಎಂದು ಚಾಟಿ ಬೀಸಿತು.
ಇದನ್ನೂ ಓದಿ: ಹಗಲು ಬಸ್ ಕಂಡಕ್ಟರ್, ಸಂಜೆ ಟೀಚರ್.. 1200 ಜನರಿಗೆ ಶಿಕ್ಷಣ ನೀಡಿದ ಶ್ಯಾಮಲಾ ಟೀಚರ್ಗೆ ಸೆಲ್ಯೂಟ್