ಭಿಂದ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಭಿಂದ್ನಲ್ಲಿ ಹೃದಯ ವಿದ್ರಾವಕ ಘಟನೆವೊಂದು ನಡೆದಿದ್ದು, ಒಂದೇ ಕುಟುಂಬದ ಎಲ್ಲ ಸದಸ್ಯರು ಸಾಮೂಹಿಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಚಿಕ್ಕ ಬಾಲಕಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಕುಟುಂಬದಲ್ಲಿ ಗಂಡ, ಹೆಂಡತಿ, ಇಬ್ಬರು ಮಕ್ಕಳಿದ್ದರು. ಮೂವರು ಸಾವನ್ನಪ್ಪಿದ್ದು, ಬಾಲಕಿ ಪ್ರಾಣಾಪಾಯದಿಂದ ಪಾರಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಳೆ.
ಮಧ್ಯಪ್ರದೇಶದ ಭಿಂದ್ನ ಗೊಹಾದ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಇವರೆಲ್ಲರೂ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದ್ದರೂ, ಕೊಲೆ ಶಂಕೆ ಹಿನ್ನೆಲೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಧರ್ಮೇಂದ್ರ ಗುರ್ಜರ್ ಆತನ ಹೆಂಡತಿ, ಹಾಗೂ ಇಬ್ಬರು ಮಕ್ಕಳೊಂದಿಗೆ ನೇಣು ಹಾಕಿಕೊಂಡಿದ್ದಾರೆ. ಧರ್ಮೇಂದ್ರ, ಪತ್ನಿ ಹಾಗೂ 11 ವರ್ಷದ ಮಗ ಸಾವನ್ನಪ್ಪಿದ್ದು, 9 ವರ್ಷದ ಬಾಲಕಿ ಪ್ರಾಣಾಪಾಯಿಂದ ಪಾರಾಗಿದ್ದಾಳೆ. ಯಾವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆಂಬುದು ಮಾತ್ರ ಇಲ್ಲಿಯವರೆಗೆ ತಿಳಿದುಬಂದಿಲ್ಲ.
ಇದನ್ನೂ ಓದಿ: ಯುಪಿಯಲ್ಲಿ ಹಿಂಸಾಚಾರಕ್ಕೆ ಕಾರಣವಾದ ಕಿಡಿಗೇಡಿಗಳ ನಿವಾಸದ ಮೇಲೆ ಬುಲ್ಡೋಜರ್ ಸವಾರಿ!
ಇಂದು ಬೆಳಗಿನಜಾವ ಮನೆಯ ಬಾಗಿಲನ್ನು ಯಾರೂ ತೆರೆದಿಲ್ಲ. ಆದರೆ, ಒಳಗಡೆಯಿಂದ ಮಗುವಿನ ಅಳುವ ಶಬ್ದ ಕೇಳಿ ಬರುತ್ತಿತ್ತು. ಹೀಗಾಗಿ, ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ತೆರೆದು ನೋಡಿದಾಗ ಕುಟುಂಬ ಸದಸ್ಯರು ನೇಣು ಹಾಕಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಫೋರೆನ್ಸಿಕ್ ತಂಡ ಆಗಮಿಸಿ, ಮಾಹಿತಿ ಕಲೆ ಹಾಕಿದೆ. ಭಿಂದ್ ಎಸ್ಪಿ ಶೈಲೇಂದ್ರ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಕಾರ್ಯಾಚರಣೆ ಆರಂಭಗೊಂಡಿದೆ.