ಹಲ್ದ್ವಾನಿ (ಉತ್ತರಾಖಂಡ್): ಸಿಯಾಚಿನ್ ಹಿಮಪಾತದಲ್ಲಿ ಕಣ್ಮರೆಯಾಗಿ 38 ವರ್ಷಗಳ ಬಳಿಕ ಪತ್ತೆಯಾದ ಭಾರತೀಯ ಸೇನೆಯ ಯೋಧ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಹರಬೋಳ ಅವರ ಮೃತದೇಹದ ಅಂತ್ಯಕ್ರಿಯೆ ಉತ್ತರಾಖಂಡ್ನ ರಾಣಿಬಾಗ್‌ನ ಚಿತ್ರಶಿಲಾ ಘಾಟ್‌ನಲ್ಲಿ ಸಕಲ ಸೇನಾ ಗೌರವಗಳೊಂದಿಗೆ ನೆರವೇರಿತು.
ಹುತಾತ್ಮ ಯೋಧ ಚಂದ್ರಶೇಖರ ಹರಬೋಳ ಅವರ ಪುತ್ರಿಯರಾದ ಕವಿತಾ ಮತ್ತು ಬಬಿತಾ ತಂದೆಯ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಹುತಾತ್ಮ ಯೋಧನ ಅಂತಿಮ ದರ್ಶನ ಪಡೆಯಲು ಅಪಾರ ಸಂಖ್ಯೆಯ ಜನರು ಸೇರಿದ್ದರು.
ಸೇನೆ, ಆಡಳಿತ ಮತ್ತು ಪೊಲೀಸ್ ಪಡೆಗಳು ಗೌರವ ನಮನ ಸಲ್ಲಿಸಿದರು. ಸಿಎಂ ಪುಷ್ಕರ್ ಸಿಂಗ್ ಧಾಮಿ, ಸಚಿವರಾದ ರೇಖಾ ಆರ್ಯ, ಗಣೇಶ್ ಜೋಶಿ ಮತ್ತು ವಿರೋಧ ಪಕ್ಷದ ನಾಯಕ ಯಶಪಾಲ್ ಆರ್ಯ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು, ಯೋಧನ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ನಂತರ ಮಾತನಾಡಿದ ಸಿಎಂ ಧಾಮಿ, ಹುತಾತ್ಮ ಯೋಧನ ತ್ಯಾಗವನ್ನು ಸ್ಮರಿಸಿದರು. ಇವರ ಬಲಿದಾನ ಮುಂದಿನ ಪೀಳಿಗೆಗೆ ಮಾದರಿಯಾಗಿದೆ. ಚಂದ್ರಶೇಖರ ಹರಬೋಳ ಒಂದೇ ಕುಟುಂಬಕ್ಕೆ ಸೇರಿದವರಲ್ಲ, ಇಡೀ ದೇಶಕ್ಕೆ ಸೇರಿದವರು. ಯೋಧನ ಹೆಸರಲ್ಲಿ ಸ್ಮಾರಕ ಸ್ಥಾಪನೆ, ರಸ್ತೆ, ಶಾಲೆಗೆ ಹೆಸರು ನಾಮಕರಣ ಮಾಡುವ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದರು.
ಇದಕ್ಕೂ ಮುನ್ನ ಭಾರತೀಯ ಸೇನೆಯ ಹೆಲಿಕಾಪ್ಟರ್ನಲ್ಲಿ ಚಂದ್ರಶೇಖರ್ ಅವರ ಪಾರ್ಥಿವ ಶರೀರವನ್ನು ಹಲ್ದ್ವಾನಿಯ ಸೇನಾ ಹೆಲಿಪ್ಯಾಡ್‌ಗೆ ತರಲಾಗಿತ್ತು. ನಂತರ ಮನೆಯಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತು. ಗ್ರಾಮದಲ್ಲಿ ಅಂತಿಮ ಯಾತ್ರೆ ನಡೆಯಿತು. ಈ ಯಾತ್ರೆಯುದ್ದಕ್ಕೂ ಭಾರತ್ ಮಾತಾ ಕೀ ಜೈ, ಶಹೀದ್ ಚಂದ್ರಶೇಖರ್ ಅಮರ್ ರಹೇ ಎಂಬ ಘೋಷಣೆಗಳು ಪ್ರತಿಧ್ವನಿಸಿದವು.
ನಾಯಕ್ ಚಂದ್ರಶೇಖರ್ ಹಿನ್ನೆಲೆ: 1984ರಲ್ಲಿ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆಯು ಆಪರೇಷನ್ ಮೇಘದೂತ್ ಎಂಬ ಕಾರ್ಯಾಚರಣೆ ಆರಂಭಿಸಿತ್ತು. ಇದೇ ವರ್ಷದ ಮೇ 29ರಂದು ಭಾರಿ ಹಿಮಪಾತ ಉಂಟಾಗಿತ್ತು. ಪರಿಣಾಮ 18 ಜನ ಸೈನಿಕರು ಸಾವನ್ನಪ್ಪಿದ್ದರು. ಆಗ 14 ಸೈನಿಕರ ಶವಗಳು ಮಾತ್ರವೇ ಪತ್ತೆಯಾಗಿದ್ದವು. ಇತರ 14 ಯೋಧರು ಕಾಣೆಯಾಗಿದ್ದರು. ಇದರಲ್ಲಿ ಗ್ಲೇಸಿಯರ್‌ನಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಲ್ಯಾನ್ಸ್ ನಾಯಕ್ ಚಂದ್ರಶೇಖರ್ ಕೂಡ ಒಬ್ಬರು.
ಇದಾದ 38 ಬಳಿಕ ವರ್ಷಗಳ ಚಂದ್ರಶೇಖರ್ ಮೃತದೇಹವು 38 ವರ್ಷಗಳ ಪತ್ತೆಯಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ಭಾರತೀಯ ಸೇನೆಯು ಯೋಧನ ಅವಶೇಷಗಳನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿತ್ತು. ಸೇನಾ ಸಂಖ್ಯೆಯನ್ನು ಹೊಂದಿರುವ ಗುರುತಿನ ಬಿಲ್ಲೆಗಳ ಸಹಾಯದಿಂದ ಯೋಧನನ್ನು ಗುರುತಿಸಲಾಗಿತ್ತು.
ಇದನ್ನೂ ಓದಿ: 38 ವರ್ಷಗಳ ಹಿಂದೆ ಸಿಯಾಚಿನ್‌ನಲ್ಲಿ ನಾಪತ್ತೆಯಾಗಿದ್ದ ಯೋಧನ ಮೃತದೇಹ ಪತ್ತೆ