ಕಿಯೋಂಜಾರ್(ಒಡಿಶಾ): ಒಡಿಶಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಭೀಕರ ರಸ್ತೆ ಅಪಘಾತ ಸಂಭವಿಸಿತು. ದುರಂತದಲ್ಲಿ 8 ಜನರು ಸಾವನ್ನಪ್ಪಿದ್ದು, 8 ಜನರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ. ಪ್ರಯಾಣಿಕರಿದ್ದ ವ್ಯಾನ್ ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದರಿಂದ ಈ ಅವಘಡ ಜರುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೇವಿ ಮಾ ತಾರಿಣಿ ದೇವಸ್ಥಾನದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕಿಯೋಂಜಾರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 20ರಲ್ಲಿ ಅಪಘಾತ ಜರುಗಿದೆ. ಸಾವನ್ನಪ್ಪಿದವರಲ್ಲಿ ಎರಡು ಕುಟುಂಬಗಳ ಜನರು ಸೇರಿದ್ದಾರೆ. ಬಲಿಜೋಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಕಿಯೋಂಜಾರ್ ಎಸ್ಪಿ ಕುಸಲ್ಕರ್ ನಿತಿನ್ ಡಾಗುಡು ಮಾತನಾಡಿ, "ಗಂಜಾಂ ಜಿಲ್ಲೆಯ ಗ್ರಾಮವೊಂದರಿಂದ ಕಿಯೋಂಜಾರ್ ಜಿಲ್ಲೆಯ ಘಾಟ್‌ಗಾಂವ್ ಪ್ರದೇಶದ ಮಾ ತಾರಿಣಿ ದೇವಸ್ಥಾನಕ್ಕೆ ತೆರಳುತ್ತಿದ್ದ ವ್ಯಾನ್‌ನಲ್ಲಿ 20 ಜನರಿದ್ದರು. ರಸ್ತೆ ಬದಿ ನಿಂತಿದ್ದ ಟ್ರಕ್‌ಗೆ ವ್ಯಾನ್ ಡಿಕ್ಕಿ ಹೊಡೆದಿದೆ. ಅಪಘಾತ ಸಂದರ್ಭದಲ್ಲಿ ವ್ಯಾನ್ ವೇಗವಾಗಿ ಚಲಿಸುತ್ತಿತ್ತು. ಮಂಜು ಇದ್ದುದರಿಂದ ಚಾಲಕನಿಗೆ ಟ್ರಕ್ ನಿಂತಿರುವುದು ಕಾಣಿಸದೇ ಇರುವ ಸಾಧ್ಯತೆ ಇದೆ. ಮೃತರ ಕುಟುಂಬಗಳಿಗೆ ಮಾಹಿತಿ ರವಾನಿಸಲಾಗಿದೆ. ಆಯಾ ಕುಟುಂಬಸ್ಥರು ಮತ್ತು ಸಂಬಂಧಿಕರು ಇನ್ನು ಕೆಲ ಹೊತ್ತಲ್ಲಿ ಆಸ್ಪತ್ರೆಗೆ ತಲುಪಲಿದ್ದಾರೆ" ಎಂದು ಹೇಳಿದರು.
ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಮೃತರು ಗಂಜಾಮ ಜಿಲ್ಲೆಯ ಪೊಡಮರಿ ಗ್ರಾಮದ ಎರಡು ಕುಟುಂಬಗಳಿಗೆ ಸೇರಿದವರು ಎಂದು ತಿಳಿದುಬಂದಿದೆ. ಈ ಪೈಕಿ ಕೆಲವರು ಬಿಜೆಡಿ ರಾಜ್ಯಸಭಾ ಮಾಜಿ ಸಂಸದೆ ರೇಣುಬಾಲಾ ಪ್ರಧಾನ್ ಅವರ ಸಂಬಂಧಿಕರು ಎಂಬ ಮಾಹಿತಿ ದೊರೆತಿದೆ. ಗಾಯಾಳುಗಳನ್ನು ಮೊದಲು ಚಿಕಿತ್ಸೆಗಾಗಿ ಘಾಟಗಾಂವ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಪ್ರಾಥಮಿಕ ಚಿಕಿತ್ಸೆಯಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‌ನ ಎಸ್‌ಸಿಬಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕಿಯೋಂಜಾರ್ ಜಿಲ್ಲೆಯ ಬಾರ್ಬಿಲ್ ಮತ್ತು ಜೋಡಾವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ನೂರಾರು ಕಬ್ಬಿಣದ ಅದಿರು ತುಂಬಿದ ಟ್ರಕ್‌ಗಳನ್ನು ನಿಲ್ಲಿಸುವುದರಿಂದ ಆಗಾಗ್ಗೆ ಅಪಘಾತಗಳು ಸಂಭವಿಸುತ್ತವೆ ಎಂದು ಸ್ಥಳೀಯರು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಗೃಹಪ್ರವೇಶ ಮುಗಿಸಿ ಬರುತ್ತಿದ್ದಾಗ ಕ್ಯಾಂಟರ್ ಡಿಕ್ಕಿ, ದಂಪತಿ ಸ್ಥಳದಲ್ಲೇ ಸಾವು