ಲಖಿಂಪುರ ಖೇರಿ(ಉತ್ತರ ಪ್ರದೇಶ): ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ಅವಘಡದಲ್ಲಿ ಬಸ್ಸಿನಲ್ಲಿದ್ದ 8 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಜಿಲ್ಲೆಯ ಇಸಾನಗರ್ ಪೊಲೀಸ್ ಠಾಣೆ ವ್ಯಾಪ್ತಿಯ ಖಮರಿಯಾ ಪೊಲೀಸ್ ಪೋಸ್ಟ್ ಬಳಿ ಶಾರದಾ ನದಿಯ ಸೇತುವೆಯ ಮೇಲೆ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ಬಸ್ ಮತ್ತು ಟ್ರಕ್ ಮುಖಾಮುಖಿಯಾಗಿ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಖಾಸಗಿ ಬಸ್‌ನಲ್ಲಿ ಕುಳಿತಿದ್ದ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 24 ಪ್ರಯಾಣಿಕರ ಸ್ಥಿತಿ ಚಿಂತಾಜನಕವಾಗಿದೆ.
ಧೌರಹರಾದಿಂದ ಸುಮಾರು 50 ಮಂದಿ ಪ್ರಯಾಣಿಕರನ್ನು ಹೊತ್ತ ಖಾಸಗಿ ಬಸ್ಸೊಂದು ಬೆಳಗ್ಗೆ 7.30ರ ಸುಮಾರಿಗೆ ಲಖಿಂಪುರಕ್ಕೆ ಬರುತ್ತಿತ್ತು. ಇಸಾನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಮರಿಯಾ ಪೊಲೀಸ್ ಪೋಸ್ಟ್ ಬಳಿ ಶಾರದಾ ನದಿಯ ಸೇತುವೆಯ ಮೇಲೆ ಲಖಿಂಪುರದಿಂದ ಬಹ್ರೈಚ್‌ಗೆ ಹೋಗುತ್ತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ.
ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿಯಿಂದಾಗಿ ಬಸ್ಸಿನಲ್ಲಿದ್ದ ಎಂಟು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 24 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಸ್ಥಳೀಯರ ಸಹಾಯದೊಂದಿಗೆ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಎಂ ಮಹೇಂದ್ರ ಬಹದ್ದೂರ್ ಸಿಂಗ್ ಮತ್ತು ಎಸ್ಪಿ ಸಂಜೀವ್ ಸುಮನ್ ಅವರು ಗಾಯಾಳುಗಳ ರಕ್ಷಣೆ ಮತ್ತು ಚಿಕಿತ್ಸೆಯ ಮೇಲ್ವಿಚಾರಣೆಗೆ ಆಗಮಿಸಿದರು. 8 ಮಂದಿ ಸಾವನ್ನಪ್ಪಿದ್ದಾರೆ ಎಂದು ಡಿಎಂ ಮಹೇಂದ್ರ ಬಹದ್ದೂರ್ ಸಿಂಗ್ ಖಚಿತ ಪಡಿಸಿದ್ದಾರೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಖಿಂಪುರ ಖೇರಿ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದರು. ಅಗಲಿದ ಕುಟುಂಬ ಸದಸ್ಯರಿಗೆ ಭಗವಂತ ನೋವು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ದು ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸಿಎಂ ಯೋಗಿ ಸೂಚನೆ ನೀಡಿದರು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು.
ಓದಿ: ಬೆಳಗಾವಿಯಲ್ಲಿ ಭೀಕರ ಸರಣಿ ರಸ್ತೆ ಅಪಘಾತ.. ಎಎಸ್ಐ ಪತ್ನಿ, ಪುತ್ರಿ, ಕಾರು ಚಾಲಕ, ಓರ್ವ ಅಜ್ಜಿ ಸೇರಿ ನಾಲ್ವರು ಸಾವು