ಮುಂಬೈ: ಉದ್ಯಮಿ ಅಂಬಾನಿ ಮನೆ ಆ್ಯಂಟಿಲಿಯಾ ಬಳಿ ಸ್ಕಾರ್ಪಿಯೋ ಕಾರ್ನಲ್ಲಿ ಸ್ಫೋಟಕ ಇಟ್ಟಿದ್ದ ಪ್ರಕರಣ ಸಂಬಂಧ ಆರೋಪಿಯಾಗಿರುವ ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಜೆಯನ್ನು ಮುಂಬೈನ ವಿಶೇಷ ಎನ್‌ಐಎ ನ್ಯಾಯಾಲಯ ವಿಚಾರಣೆ ನಡೆಸಿದೆ.
ಮುಕೇಶ್ ಅಂಬಾನಿಯವರ 'ಆ್ಯಂಟಿಲಿಯಾ'ದ ಹೊರಗೆ ಸ್ಫೋಟಕಗಳನ್ನು ಇಡುವ ಸಂಚುಗಳಲ್ಲಿ ಈಗಾಗಲೇ ಸಾವನ್ನಪ್ಪಿರುವ ಮನ್ಸುಖ್ ಹಿರೆನ್ ಕೂಡ ಭಾಗಿಯಾಗಿದ್ದ. ಅದಕ್ಕಾಗಿಯೇ ಆತ ತನ್ನ ಪ್ರಾಣವನ್ನು ಕಳೆದುಕೊಂಡ ಎಂದು ಎನ್ಐಎ ಬುಧವಾರ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ. ಈ ಇಡೀ ಘಟನೆಯಲ್ಲಿ ದೊಡ್ಡ ಆರ್ಥಿಕ ಉದ್ದೇಶವಿತ್ತು ಎಂಬುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಇದನ್ನು ಓದಿ: ಆ್ಯಂಟಿಲಿಯಾ ಪ್ರಕರಣ: ಸಚಿನ್ ವಾಜೆ ಎನ್ಐಎ ಕಸ್ಟಡಿ ವಿಸ್ತರಣೆ
ಪ್ರಕರಣದ ಪ್ರಮುಖ ಆರೋಪಿ ಸಚಿನ್ ವಾಜೆಯನ್ನು ಏಪ್ರಿಲ್ 9ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದೆ. ಯುಎಪಿಎ ಕಾಯ್ದೆಯ ನಿಬಂಧನೆಗಳ ಪ್ರಕಾರ ಆರೋಪಿಗಳಿಗೆ 30 ದಿನಗಳ ಕಸ್ಟಡಿ ಪೂರ್ಣಗೊಳಿಸಲು ಅವಕಾಶ ನೀಡುವಂತೆ ಎನ್‌ಐಎ ಪರವಾಗಿ ಎಎಸ್‌ಜಿ ಅನಿಲ್ ಸಿಂಗ್ ನ್ಯಾಯಾಲಯವನ್ನು ಕೋರಿದರು. ಅದರಂತೆ ನ್ಯಾಯಾಲಯವು ವಾಜೆಯನ್ನ ಎನ್ಐಎ ರಿಮ್ಯಾಂಡ್ ಅನ್ನು ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಿತು. ಮುಂದಿನ ವಿಚಾರಣೆಯಲ್ಲಿ ವಾಜೆಯ ಸ್ಥಿತಿಯ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಕೋರ್ಟ್ ತನಿಖಾ ಸಂಸ್ಥೆಗೆ ನಿರ್ದೇಶನ ನೀಡಿದೆ.
ಇದನ್ನು ಓದಿ: ಮನ್ಸುಖ್ ಹಿರೆನ್ ಸಾವು ಪ್ರಕರಣ ಎನ್ಐಎಗೆ ಹಸ್ತಾಂತರಿಸುವಂತೆ ಕೋರ್ಟ್ ಆದೇಶ
ತನಿಖಾಧಿಕಾರಿಗಳ ಪ್ರಕಾರ, ಈ ಪ್ರಕರಣದಲ್ಲಿ ಬಂಧಿತರಾಗಿರುವ ವಿನಾಯಕ್ ಶಿಂಧೆ ಮತ್ತು ನರೇಶ್ ಗೋರ್ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನದಲ್ಲಿರಿಸಿದೆ.
ಸಚಿನ್ ವಾಜೆಯನ್ನು ತನಿಖೆ ಮಾಡಲು ನ್ಯಾಯಾಲಯ ಸಿಬಿಐಗೆ ಅನುಮತಿ ನೀಡಿದೆ. ಸಿಬಿಐ ಅಧಿಕಾರಿಗಳು ಎನ್‌ಐಎ ನ್ಯಾಯಾಲಯದಲ್ಲಿ ಬುಧವಾರ ಅರ್ಜಿ ಸಲ್ಲಿಸಿದ್ದಾರೆ. ಈಗ ಪರಂಬೀರ್ ಸಿಂಗ್ ಅವರ ಆರೋಪಗಳನ್ನು ಸಿಬಿಐ ತನಿಖೆ ನಡೆಸಲಿದೆ. ಈ ಬಗ್ಗೆ ಇಬ್ಬರು ತನಿಖಾಧಿಕಾರಿಗಳು ಜಂಟಿಯಾಗಿ ತೀರ್ಮಾನಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಇದನ್ನು ಓದಿ: ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಕೇಸ್: ವಾಜೆ-ಮನ್ಸುಖ್ ಹಿರೆನ್ ಭೇಟಿಯ ಮಹತ್ವದ ಸಿಸಿಟಿವಿ ದೃಶ್ಯ
ಹೈಕೋರ್ಟ್ ಆದೇಶದ ನಂತರ, ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರು ಮಾಡಿದ ಗಂಭೀರ ಆರೋಪಗಳ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ಮುಂಬೈಗೆ ಆಗಮಿಸಿದೆ. ಕೆಲವು ದಿನಗಳ ಹಿಂದೆ ಪರಂಬೀರ್ ಸಿಂಗ್ ಅವರು, ಗೃಹ ಸಚಿವರು ಮುಂಬೈ ಪೊಲೀಸರಿಗೆ ತಿಂಗಳಿಗೆ 100 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲು ಆದೇಶಿಸಿದ್ದಾರೆ ಎಂದು ಆರೋಪ ಮಾಡಿದ್ದರು. ಈ ಹೇಳಿಕೆ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಬಳಿಕ ನೈತಿಕ ಹೊಣೆ ಹೊತ್ತು ಅನಿಲ್ ದೇಶಮುಖ್ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.