ನವದೆಹಲಿ: ಮಂಗಳಮುಖಿಯಾಗಿ ಎಲ್ಲರೂ ಅಚ್ಚರಿಪಡುವ ಸಾಧನೆ ಮಾಡಿರುವ, ಜಾನಪದ ನೃತ್ಯ ಕಲಾವಿದೆ ಮಂಜಮ್ಮ ಜೋಗತಿ ಇಂದು ಪದ್ಮಶ್ರೀ ಪುರಸ್ಕಾರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಂದ ಸ್ವೀಕರಿಸಿದರು.
ಕರ್ನಾಟಕ ಜಾನಪದ ಅಕಾಡೆಮಿಯ ಮೊದಲ ತೃತೀಯ ಲಿಂಗಿ ಅಧ್ಯಕ್ಷರಾಗಿರುವ ಅವರು ಇಂದು ಪುರಸ್ಕಾರ ಪಡೆಯುವ ವೇಳೆ ರಾಷ್ಟ್ರಪತಿ ಕೋವಿಂದ್ ಅವರಿಗೆ ತಮ್ಮದೇ ಶೈಲಿಯಲ್ಲಿ ದೃಷ್ಟಿ ತೆಗೆದರು.
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯ ಹಿರಿಯ ರಂಗ ಕಲಾವಿದೆಯಾಗಿರುವ ಮಂಜಮ್ಮ, ಮಂಗಳಮುಖಿಯಾಗಿ ಸಾಕಷ್ಟು ನೋವುಂಡಿದ್ದಾರೆ. ತಮ್ಮ ಚಿಕ್ಕ ವಯಸ್ಸಿನಿಂದ ಕಲಾಸೇವೆ ಮಾಡುತ್ತಾ, ಜನಪದ ನೃತ್ಯದ ಮೂಲಕ ಗ್ರಾಮ, ಜಾತ್ರೆ, ಸಂತೆ, ವೇದಿಕೆ ಹೀಗೆ ಮುಂತಾದ ಸ್ಥಳಗಳಲ್ಲಿ ಸಾವಿರಾರು ಪ್ರದರ್ಶನಗಳನ್ನು ರಾಜ್ಯಾದ್ಯಂತ ನೀಡಿದ್ದಾರೆ.
ಜೋಗತಿ ಕಲೆ ಪ್ರದರ್ಶನ ಜೊತೆಗೆ, ನಾಟಕ, ನಿರ್ದೇಶನ, ಹಾಡು, ಕುಣಿತ ಮುಂತಾದ ಮನೋರಂಜನಾತ್ಮಕ ಕಲೆಗಳನ್ನು ರೂಢಿಸಿಕೊಂಡಿರುವ ಮಂಜಮ್ಮ ಜೋಗತಿ ಅವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಈಗ ದೊರೆತಿರುವ ಪದಶ್ಮೀ ಪುರಸ್ಕಾರ ಅವರಿಗೆ ಸಾಧನೆಗೆ ಮತ್ತೊಂದು ಗರಿಯಾಗಿದೆ.
ಇದನ್ನೂ ಓದಿ: ಕಟ್ಟುಪಾಡುಗಳನ್ನು ಮೆಟ್ಟಿ ನಿಂತ ಜೋಗತಿ ಮಂಜಮ್ಮ.. ಜೀವನ-ಸಾಧನೆಯ ಕಿರುನೋಟ..