ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಕರೆದೊಯ್ದಿದರು. ನಂತರ ಮಧ್ಯಾಹ್ನ 2 ಗಂಟೆ ಸುಮಾರಿಗೆ ವಿಶೇಷ ಸಿಬಿಐ ನ್ಯಾಯಾಧೀಶ ಎಂ.ಕೆ. ನಾಗಪಾಲ್ ಅವರ ಮುಂದೆ ಸಿಸೋಡಿಯಾರನ್ನು ಹಾಜರುಪಡಿಸಿದ್ದಾರೆ. ನ್ಯಾಯಾಲಯ ಅವರನ್ನು ಏಪ್ರಿಲ್ 5 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಏ. 5 ವರೆಗೆ ತಿಹಾರ್ ಜೈಲಿಗೆ ಸಿಸೋಡಿಯಾ: ಜಾರಿ ನಿರ್ದೇಶನಾಲಯದ ಕೋರಿಕೆಯ ಮೇರೆಗೆ ಮಾರ್ಚ್ 16 ರಂದು ಸಿಸೋಡಿಯಾ ಅವರನ್ನು ನ್ಯಾಯಾಲಯವು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿತ್ತು. ಇದಕ್ಕೂ ಮುನ್ನ ಮಾರ್ಚ್ 10 ರಂದು ಅವರನ್ನು ಏಳು ದಿನಗಳ ಕಾಲ ಇಡಿ ರಿಮಾಂಡ್‌ಗೆ ಕಳುಹಿಸಲಾಗಿತ್ತು. ನಂತರ ಮಾರ್ಚ್ 9 ರಂದು ತಿಹಾರ್ ಜೈಲಿನಿಂದ ಸಿಸೋಡಿಯಾ ಅವರನ್ನು ಇಡಿ ನ್ಯಾಯಾಲಯಕ್ಕೆ ಹಾಜರುಪಡಿಸಿತ್ತು. ಬುಧವಾರ ನ್ಯಾಯಾಲಯವು ಸಿಸೋಡಿಯಾ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳವರೆಗೆ ವಿಸ್ತರಿಸಿದೆ. ಸಿಸೋಡಿಯಾ ಅವರನ್ನು ಏಪ್ರಿಲ್ 5 ವರೆಗೆ ತಿಹಾರ್ ಜೈಲಿನಲ್ಲಿ ಇರಿಸಲಾಗುತ್ತದೆ.
ಮಾ. 25ಕ್ಕೆ ಮುಂದಿನ ವಿಚಾರಣೆ: ಸಿಸೋಡಿಯಾ ಅವರ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣದಲ್ಲಿ ಉತ್ತರವನ್ನು ಸಲ್ಲಿಸುವಂತೆ ಇಡಿಗೆ ನೋಟಿಸ್ ನೀಡಿದೆ. ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಮಾರ್ಚ್ 25 ಕ್ಕೆ ನಿಗದಿಪಡಿಸಿದೆ. ಈ ವೇಳೆ ಸಿಸೋಡಿಯಾ ಪರ ಹಾಜರಾದ ಹಿರಿಯ ವಕೀಲ ದಯಾ ಕೃಷ್ಣನ್ ಜಾಮೀನು ನೀಡುವಂತೆ ಕೋರಿದರು.
ಇದನ್ನೂ ಓದಿ:ಹಗರಣದಲ್ಲಿ ಶಿಕ್ಷಣ ಸಚಿವರು ಜೈಲು ಪಾಲಾಗಿದ್ದು ಇತಿಹಾಸದಲ್ಲೇ ಮೊದಲು: ಗೌತಮ್ ಗಂಭೀರ್ ಟೀಕೆ
ತೆಲಂಗಾಣ ಸಿಎಂ ಪುತ್ರಿ ಕವಿತಾಗೆ 10 ತಾಸು ವಿಚಾರಣೆ ನಡೆಸಿದ್ದ ಇಡಿ: ದೆಹಲಿಯ ಅಬಕಾರಿ ನೀತಿ ಸಂಬಂಧಿತ ಹಗರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಪುತ್ರಿ ಹಾಗೂ ಬಿಆರ್‌ಎಸ್ ಪಕ್ಷದ ನಾಯಕಿ ಕೆ.ಕವಿತಾ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಸೋಮವಾರ 10 ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಿತ್ತು. ಸೋಮವಾರ ದಿಲ್ಲಿಯಲ್ಲಿನ ಇಡಿ ಕಚೇರಿಗೆ ಬೆಳಗ್ಗೆ 10:30ಕ್ಕೆ ಆಗಮಿಸಿದ್ದ ಕವಿತಾ ಅವರಿಂದ ಅಧಿಕಾರಿಗಳು 11 ಗಂಟೆಯಿಂದಲೇ ಹೇಳಿಕೆ ದಾಖಲಿಸಿಕೊಳ್ಳಲು ಶುರು ಮಾಡಿದ್ದರು. ಪ್ರಕರಣದಲ್ಲಿ ಕವಿತಾ ಆರೋಪಿಯಾಗಿರುವ ಕಾರಣ ಅವರ ಪ್ರತಿಯೊಂದು ಹೇಳಿಕೆಯನ್ನೂ ಅಧಿಕಾರಿಗಳು ಅಚ್ಚುಕಟ್ಟಾಗಿ ದಾಖಲಿಸಿಕೊಂಡಿದ್ದಾರೆ. 10 ಗಂಟೆಗೂ ಅಧಿಕ ಕಾಲ ಪ್ರಶ್ನಿಸಿದ ಇಡಿ ರಾತ್ರಿ 9:15 ರ ಬಳಿಕ ಅವರು ಬಿಟ್ಟಿತ್ತು.
ಭಾರತ್ ರಾಷ್ಟ್ರ ಸಮಿತಿ(ಬಿಆರ್‌ಎಸ್) ಎಂಎಲ್ಸಿ ಕವಿತಾ ಅವರು ವಿಚಾರಣೆಯ ಬಳಿಕ ಇಡಿ ಕಚೇರಿಯಿಂದ ಹೊರಬರುತ್ತಿದ್ದಾಗ ವಿಜಯದ ಸಂಕೇತವನ್ನು ಪತ್ರಕರ್ತರತ್ತ ತೋರಿಸುತ್ತಾ ನಗುಮುಖದಿಂದಲೇ ಕಾರಿನ ಕಡೆಗೆ ಹೆಜ್ಜೆ ಹಾಕಿದ್ದರು. ಇದಕ್ಕೂ ಮೊದಲು ಮಾರ್ಚ್ 11 ರಂದು ಸುಮಾರು 9 ಗಂಟೆಗಳ ಕಾಲ ಇವರನ್ನು ಇಡಿ ಮೊದಲ ಬಾರಿಗೆ ಪ್ರಶ್ನಿಸಿತ್ತು. ನಂತರ ಮಾರ್ಚ್ 16 ರಂದು 2ನೇ ಬಾರಿಗೆ ವಿಚಾರಣೆ ನಡೆಸಲಾಗಿತ್ತು.