ಇಂಫಾಲ, ಮಣಿಪುರ: ರಾಜ್ಯ ವಿಧಾನಸಭೆಯ ಮುಂದಿನ ಅಧಿವೇಶನವನ್ನು ಆಗಸ್ಟ್ 21 ರಂದು ಕರೆಯುವಂತೆ ಮಣಿಪುರ ಕ್ಯಾಬಿನೆಟ್ ಶುಕ್ರವಾರ ರಾಜ್ಯಪಾಲ ಅನುಸೂಯಾ ಉಯ್ಕೆ ಅವರಿಗೆ ಶಿಫಾರಸು ಮಾಡಿದೆ. ವಿಧಾನಸಭೆಯ ಕೊನೆಯ ಅಧಿವೇಶನ ಮಾರ್ಚ್‌ನಲ್ಲಿ ನಡೆದಿತ್ತು. ಈ ಹಿಂದೆ ರಾಜ್ಯದಲ್ಲಿ ನಡೆಯುತ್ತಿರುವ ಗೊಂದಲದ ಬಗ್ಗೆ ಚರ್ಚಿಸಲು ವಿಧಾನಸಭೆಯ ತುರ್ತು ಅಧಿವೇಶನ ಕರೆಯುವಂತೆ ಕಾಂಗ್ರೆಸ್ ಕೂಡ ರಾಜ್ಯಪಾಲರಿಗೆ ಮನವಿ ಮಾಡಿದೆ.
ಸಂಕ್ಷಿಪ್ತ ಅಧಿಸೂಚನೆಯಲ್ಲಿ, 12ನೇ ಮಣಿಪುರ ವಿಧಾನಸಭೆಯ ನಾಲ್ಕನೇ ಅಧಿವೇಶನವನ್ನು 2023ರ ಆಗಸ್ಟ್ 21 ರಂದು ಕರೆಯಲು ರಾಜ್ಯ ಸಚಿವ ಸಂಪುಟವು ರಾಜ್ಯಪಾಲರಿಗೆ ಶಿಫಾರಸು ಮಾಡಿದೆ. ಇದಲ್ಲದೇ, ರಾಜ್ಯದಲ್ಲಿ ನಡೆಯುತ್ತಿರುವ " ಭಾರಿ ಪ್ರಕ್ಷುಬ್ಧತೆ" ಕುರಿತು ಚರ್ಚಿಸಲು ವಿಧಾನಸಭೆಯ ತುರ್ತು ಅಧಿವೇಶನವನ್ನು ಕರೆಯುವಂತೆ ಕಾಂಗ್ರೆಸ್ ರಾಜ್ಯಪಾಲರಿಗೆ ಮನವಿ ಮಾಡಿದೆ.
ಮಣಿಪುರ ವಿಧಾನಸಭೆಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಒಕ್ರಾಮ್ ಇಬೋಬಿ ಸಿಂಗ್ ಸೇರಿದಂತೆ ಐವರು ಕಾಂಗ್ರೆಸ್ ಶಾಸಕರು ಕಳೆದ ತಿಂಗಳು ರಾಜ್ಯಪಾಲರಿಗೆ ಪತ್ರದಲ್ಲಿ ಬರೆದಿದ್ದರು. ಈ ಪತ್ರದಲ್ಲಿ, ಮೇ ಆರಂಭದಿಂದ ಜಾತಿ ಕಲಹದಿಂದ ಪೀಡಿತ ರಾಜ್ಯದಲ್ಲಿ ಪ್ರಸ್ತುತ ಪರಿಸ್ಥಿತಿ ಮತ್ತು ಶಾಂತಿಯನ್ನು ಪುನಃಸ್ಥಾಪಿಸುವ ಮಾರ್ಗಗಳನ್ನು ಚರ್ಚಿಸಿ. ಸಲಹೆಗಳನ್ನು ಸ್ವೀಕರಿಸಲು ಅಧಿವೇಶನ ಅತ್ಯಂತ ಸೂಕ್ತವಾದ ವೇದಿಕೆಯಾಗಿದೆ ಎಂದು ಉಲ್ಲೇಖಿಸಿದ್ದರು.
ಮಣಿಪುರಕ್ಕೆ ಭೇಟಿ ನೀಡಿದ್ದ ಪ್ರತಿ ಪಕ್ಷದ ಸಂಸದರ ನಿಯೋಗದ ಭಾಗವಾಗಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಸುಶ್ಮಿತಾ ದೇವ್ ಅವರು ಮಾತನಾಡಿ, ಪ್ರಜಾಪ್ರಭುತ್ವವು ಹೊಣೆಗಾರಿಕೆಗೆ ಸಂಬಂಧಿಸಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ತರುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಅಗತ್ಯವಿದೆ ಎಂದು ನಾವು ಭಾವಿಸುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಜನಾಂಗೀಯ ಘರ್ಷಣೆಗಳು ಪ್ರಾರಂಭವಾದಾಗಿನಿಂದ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಮಣಿಪುರದಲ್ಲಿ ಮೈತೇಯೆ ಜನಸಂಖ್ಯೆಯ ಸುಮಾರು 53 ಪ್ರತಿಶತವನ್ನು ಹೊಂದಿದ್ದಾರೆ ಮತ್ತು ಹೆಚ್ಚಾಗಿ ಇಂಫಾಲ್ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಬುಡಕಟ್ಟು ನಾಗಾಗಳು ಮತ್ತು ಕುಕಿಗಳು 40 ಪ್ರತಿಶತಕ್ಕಿಂತ ಹೆಚ್ಚಿದ್ದಾರೆ. ಇವರೆಲ್ಲ ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.
ಮೇ 3 ರಿಂದ ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ಕಳೆದ ತಿಂಗಳು ವೈರಲ್ ಆಗಿದ್ದ ವಿಡಿಯೋಗೆ ಸಂಬಂಧಿಸಿದಂತೆ ಹಳ್ಳಿಯಿಂದ ಸದನದವರೆಗೆ ಭಾರಿ ಗದ್ದಲವೇ ಏರ್ಪಟ್ಟಿತ್ತು. ಶಾಂತಿ ಕಾಪಾಡುವಂತೆ ರಾಜ್ಯಪಾಲರಾದ ಅನುಸೂಯಾ ಉಯ್ಕೆ ಜನತೆಗೆ ಮನವಿ ಮಾಡಿದ್ದರು. ಇಬ್ಬರು ಮಹಿಳೆಯರ ಮೆರವಣಿಗೆ ವಿಡಿಯೋ ವೈರಲ್ ಆದ ಕಾರಣ ಸಂಸತ್ತಿನ ಉಭಯ ಸದನಗಳಲ್ಲೂ ಈ ವಿಚಾರ ಸದ್ದು ಮಾಡಿತ್ತು. ಪ್ರಧಾನಿ ಮೋದಿ ಸದನಕ್ಕೆ ಬಂದು ಉತ್ತರಿಸುವಂತೆ ಪ್ರತಿ ಪಕ್ಷಗಳ ಸಂಸದರು ಒತ್ತಾಯಿಸುತ್ತಿದ್ದಾರೆ.
ಓದಿ: ಮುಂಬೈನಲ್ಲಿ ಇಂಡಿಯಾ ಮೈತ್ರಿಕೂಟದ ಮೂರನೇ ಸಭೆ: ಆ. 31 ಮತ್ತು ಸೆ.1ಕ್ಕೆ ಮೀಟಿಂಗ್ ನಡೆಯುವ ಸಾಧ್ಯತೆ