ವಿಶಾಖಪಟ್ಟಣ(ಆಂಧ್ರಪ್ರದೇಶ) : ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು..ನಮ್ಮ ಇತಿಹಾಸ ಕೂಡಾ ಅದನ್ನೇ ಹೇಳುತ್ತದೆ. ರಾಣಿ ಅಬ್ಬಕ್ಕ, ಕಿತ್ತೂರ ರಾಣಿ ಚೆನ್ನಮ್ಮ, ಒನಕೆ ಓಬವ್ವರಂತಹ ವೀರನಾರಿಯರ ಶ್ರೇಷ್ಠ ಇತಿಹಾಸ ಹೊಂದಿರುವ ನಮ್ಮ ನೆಲದಲ್ಲಿ ಮರೆಯಾದ ಯುದ್ಧ ಕೌಶಲ್ಯಗಳನ್ನು ನೆನಪಿಸೋ ಯುವತಿಯೊಬ್ಬರು ಸಾಧನೆಯ ಹಾದಿಯಲ್ಲಿ ತೆರಳುತ್ತಿದ್ದಾರೆ.
ಮಂಗಳೂರಿನ ಕುವರಿ ಈ ವೆನ್ನಲಾ:
ಮಾರ್ಷಲ್ ಆರ್ಟ್ಸ್ ಅಂದ್ರೆ ಹೆಣ್ಮಕ್ಕಳಿಗೆ ಸಂಬಂಧಿಸಿಲ್ಲ ಅಂದ್ಕೋಳ್ಳೋರೇ ಹೆಚ್ಚು. ಆದರೆ, ಈ ಯುವತಿ ಖಡ್ಗ ಝಳಪಿಸೋದನ್ನು ನೋಡಿದ್ರೆ ನಿಜಕ್ಕೂ ಅಚ್ಚರಿಯಾಗುತ್ತದೆ. ದಕ್ಷಿಣ ಭಾರತದ ಮಾರ್ಷಲ್ ಆರ್ಟ್ಸ್ ಆದ ಸಿಲಾಂಬಂನಲ್ಲಿ ಮಂಗಳೂರು ಮೂಲದ ಯುವತಿ ವೆನ್ನಲಾ ನೀಲಕಂಠ ಖಡ್ಗ ಝಳಪಿಸಿ, ಅನೇಕ ಪದಕಗಳನ್ನು ತಮ್ಮ ಕೊರಳಿಗೇರಿಸಿಕೊಂಡು ಕನ್ನಡ ನಾಡಿಗೆ ಕೀರ್ತಿ ತಂದಿದ್ದಾರೆ.
ಮಾರ್ಷಲ್ ಆರ್ಟ್ಗೂ ಸೈ...ಓದೋದ್ರಲ್ಲೂ ಎತ್ತಿದ ಕೈ :
ವೆನ್ನಲಾ ನೀಲಕಂಠ ಮೂಲತಃ ಮಂಗಳೂರಿನ ಮುಡಿಪು ಗ್ರಾಮದರಾಗಿದ್ದು, ಬಡಕುಟುಂಬದಲ್ಲಿ ಜನಿಸಿ ಚಿಕ್ಕ ವಯಸ್ಸಿನಿಂದಲೇ ಮಾರ್ಷಲ್ ಆರ್ಟ್ಸ್ ಕಡೆಗೆ ಗಮನ ಹರಿಸಿದ್ದರು. ಇದರ ಜೊತೆಗೆ ವಿದ್ಯಾಭ್ಯಾಸದಲ್ಲೂ ಮುಂದಿರುವ ವೆನ್ನಲಾ ಬಿ.ಇ ಮುಗಿಸಿದ್ದು, ಸದ್ಯ ಎಂ ಟೆಕ್ ಓದುತ್ತಿದ್ದಾರೆ. ಇವರು ತಮ್ಮ ಓದಿಗೆ ತಾವೇ ದುಡಿದ ಹಣವನ್ನು ಬಳಸುತ್ತಿದ್ದಾರೆ. ಯೋಗ ಶಿಕ್ಷಕಿಯೂ ಆಗಿರುವ ಅವರು, ಇನ್ನೂ ಹಲವಡೆ ಮಾರ್ಷಲ್ ಆರ್ಟ್ಸ್ ಟ್ರೇನಿಂಗ್ ನೀಡಿ ಬಂದ ಹಣದಿಂದ ಓದನ್ನು ಮುಂದುವರೆಸುತ್ತಿದ್ದಾರೆ.
ಕರುನಾಡಿಗೆ ಕೀರ್ತಿ ತಂದ ಯುವತಿ:
ವರ್ಲ್ಡ್ ಯೂನಿಯನ್ ಸಿಲಾಂಬಂ ಫೆಡರೇಷನ್ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳನ್ನು ಆಯೋಜನೆ ಮಾಡಿತ್ತು. ಈ ಸಿಲಾಂಬಾಂನ ಸ್ಪರ್ಧೆಗಳಲ್ಲಿ ಹಲವಾರು ಪದಕಗಳನ್ನು ಗೆದ್ದಿರುವ ವೆನ್ನಲಾ ಅವರು ವಿವಿಧ ಮಾರ್ಷಲ್ ಆರ್ಟ್ಸ್ ಕಲೆಗಳಲ್ಲೂ ಕೂಡಾ ಅದ್ವಿತೀಯ ಸಾಧನೆ ಮಾಡಿದ್ದಾರೆ. ಸುಮಾರು 10 ವರ್ಷಗಳಿಂದ ತರಬೇತಿ ಪಡೆದು ಈ ಸಾಧನೆ ಮಾಡಿದ್ದಾರೆ.
ಸಿಲಾಂಬಾಂ ಸಂಘ ಕಾಲದ ಮಾರ್ಷಲ್ ಆರ್ಟ್ಸ್ ಪ್ರಕಾರವಾಗಿದ್ದು, ಪೂರ್ವಜರು ತಮಿಳುನಾಡು ಮೂಲದವರಾಗಿದ್ದು, ವೆನ್ನಲಾಗೆ ಇದರ ಕಲಿಕೆಗೆ ಸುಲಭವಾಗಿದೆ. ಏನೇ ಆದರೂ ಕನ್ನಡದ ಯುವತಿಯೊಬ್ಬರು ಸಾಧನೆ ಹೀಗೇ ಮುಂದುವರೆಯಲಿ ಎಂಬುದು ಕನ್ನಡಿಗರ ಆಶಯವಾಗಿದೆ.