ಮಂಡಿ (ಹಿಮಾಚಲಪ್ರದೇಶ): ಹಿಮಾಚಲಪ್ರದೇಶದಲ್ಲಿ ಕ್ರಿಪ್ಟೋ ಕರೆನ್ಸಿ ವಂಚನೆ ಪ್ರಕರಣದ ಬಳಿಕ ಇದೀಗ ಮತ್ತೊಂದು ಬಹುರಾಷ್ಟ್ರೀಯ ಕಂಪನಿ ಹೆಸರಿನಲ್ಲಿ ವಂಚನೆ ಮಾಡಿರುವ ಪ್ರಕರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಕ್ಯೂಎಫ್‌ಎಕ್ಸ್ ಕಂಪನಿಯು ಫಾರೆಕ್ಸ್ ಟ್ರೇಡಿಂಗ್ ಹೆಸರಿನಲ್ಲಿ ಜನರಿಂದ ಹಣ ಪಡೆದು ಹೆಚ್ಚಿನ ಆದಾಯದ ಕನಸುಗಳನ್ನು ತೋರಿಸಿ ವಂಚಿಸಿದೆ ಎಂದು ಆರೋಪಿಸಲಾಗಿದೆ. ಬರೋಬ್ಬರಿ 210 ಕೋಟಿ ರೂ. ಗಳ ವಂಚನೆ ನಡೆದಿದೆ ಎಂದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಪ್ರಕರಣದಲ್ಲಿ ದೆಹಲಿ ಮತ್ತು ಹರಿಯಾಣ ಮೂಲದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಮಂಡಿ ಪೊಲೀಸ್ ವರಿಷ್ಠಾಧಿಕಾರಿ ಸೌಮ್ಯ ಸಾಂಬಶಿವನ್ ಪ್ರತಿಕ್ರಿಯೆ ನೀಡಿದ್ದು, ವಿಷಯ ಬೆಳಕಿಗೆ ಬರುತ್ತಿದ್ದಂತೆ ಆರೋಪಿಗಳು ವಿದೇಶಕ್ಕೆ ಪಲಾಯನ ಮಾಡಲು ಸಿದ್ಧತೆ ನಡೆಸಿದ್ದರು, ಇದೀಗ ಅವರನ್ನು ಬಂಧಿಸಲಾಗಿದೆ. ಚಂಡೀಗಢ ಹೊರತುಪಡಿಸಿ ದೇಶದ ಐದು ರಾಜ್ಯಗಳಲ್ಲಿ ಈ ಜಾಲ ಹರಡಿತ್ತು. ಕಂಪನಿಯು ಹಿಮಾಚಲ, ಪಂಜಾಬ್, ಗೋವಾ, ಗುಜರಾತ್ ಮತ್ತು ಚಂಡೀಗಢದಲ್ಲಿ ನೆಟ್‌ವರ್ಕ್ ಹೊಂದಿದ್ದು, ಇದರಲ್ಲಿ ನೂರಾರು ಜನರ ಹಣ ಹೂಡಿಕೆ ಮಾಡಿದ್ದಾರೆ. ಸದ್ಯ ಆರೋಪಿಗಳ ವಿಚಾರಣೆ ನಡೆಯುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಳನ್ನು ಕೆಲೆ ಹಾಕಲಾಗುತ್ತಿದೆ ಎಂದು ಹೇಳಿದ್ದಾರೆ.
ಕ್ಯೂಎಫ್‌ಎಕ್ಸ್ ಕಂಪನಿ ಫಾರೆಕ್ಸ್ ಟ್ರೇಡಿಂಗ್ ಹೆಸರಿನಲ್ಲಿ ಯಾವುದೇ ಪರವಾನಗಿ ಪಡೆಯದೇ ಕಾರ್ಯ ನಿರ್ವಹಿಸುತ್ತಿದೆ. ಸದ್ಯ ಕಂಪನಿಯ ಬ್ಯಾಂಕ್ ಖಾತೆಗಳನ್ನು ಪೊಲೀಸರು ಸ್ಥಗಿತಗೊಳಿಸಿದ್ದಾರೆ. ಸುಮಾರು 30 ಲಕ್ಷ ರೂಪಾಯಿ ಮೊತ್ತದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಂಪನಿಯ ಎರಡು ಕಚೇರಿಗಳನ್ನು ಸೀಲ್ ಮಾಡಲಾಗಿದೆ. ಅಲ್ಲದೇ ಈ ಸಂಬಂಧ ಎರಡು - ಮೂರು ದೂರುಗಳು ಬಂದಿವೆ. ಈ ಬಗ್ಗೆ ತನಿಖೆ ನಡೆಸಿದಾಗ ಪ್ರಾಥಮಿಕ ತನಿಖೆಯಲ್ಲಿ ಹಲವು ಮಹತ್ವದ ಸಂಗತಿಗಳು ಪತ್ತೆಯಾಗಿವೆ.
ಈ ಹಗರಣದಲ್ಲಿ 100ಕ್ಕೂ ಹೆಚ್ಚು ಮಂದಿ ಕಂಪನಿಯಲ್ಲಿ ಹಣ ಹೂಡಿದ್ದಾರೆ ಎಂದು ತಿಳಿದು ಬಂದಿದೆ. ಕಂಪನಿಯು ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದು, ಇದರಲ್ಲಿ ಮ್ಯೂಚುವಲ್ ಫಂಡ್ ಮತ್ತು ಇತರ ವ್ಯಾಪಾರದ ಹೆಸರಿನಲ್ಲಿ ಹೂಡಿಕೆದಾರರನ್ನು ವಂಚಿಸಲಾಗಿದೆ. ಕಂಪನಿಗಳ ಕಾಯಿದೆಯಡಿ ನೋಂದಾಯಿಸಲ್ಪಟ್ಟಿದೆ, ಆದರೆ, ಬಹುರಾಷ್ಟ್ರೀಯ ಕಂಪನಿಯಲ್ಲಿ ವ್ಯಾಪಾರ ಮಾಡಲು ಯಾವುದೇ ಪರವಾನಗಿಯನ್ನು ಹೊಂದಿರಲಿಲ್ಲ.
ಹೂಡಿಕೆದಾರರಿಂದ ತೆಗೆದುಕೊಂಡ ಹಣದಲ್ಲಿ ಕೇವಲ ಐದು ಪ್ರತಿಶತವನ್ನು ಮಾತ್ರ ಹೂಡಿಕೆ ಮಾಡಲಾಗುತ್ತಿತ್ತು. ಅಪರಾಧಿಗಳು ಕಂಪನಿಯ ಖಾತೆಯಲ್ಲಿ ಹಣದ ವಹಿವಾಟು ನಡೆಸುತ್ತಿದ್ದರು. ಒಬ್ಬ ಆರೋಪಿಯನ್ನು ದೆಹಲಿಯಿಂದ ಮತ್ತು ಇನ್ನೊಬ್ಬನನ್ನು ಹರಿಯಾಣದಿಂದ ಬಂಧಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ ಈ ಹಗರಣದಲ್ಲಿ 6-7 ಜನ ಭಾಗಿಯಾಗಿರುವುದು ತಿಳಿದು ಬಂದಿದೆ. ಮುಂದಿನ ದಿನಗಳಲ್ಲಿ ಇವರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಮಂಡಿ ಜಿಲ್ಲೆಯ ಜನರೇ ಗರಿಷ್ಠ ಹಣವನ್ನು ಹೂಡಿಕೆ ಮಾಡಿದ್ದಾರೆ. ಕಂಪನಿಯು ಮಂಡಿ ನಗರದಲ್ಲಿ ಮತ್ತು ಬಾಲ್ಹ್‌ನಲ್ಲಿ ನಾಗಚಲದಲ್ಲಿ ಕಚೇರಿಗಳನ್ನು ತೆರೆದಿತ್ತು. ಇದಲ್ಲದೇ, ಕಂಪನಿಯು ಚಂಡೀಗಢದ ಜಿರಾಕ್‌ಪುರದಲ್ಲಿ ತನ್ನ ಮುಖ್ಯ ಕಚೇರಿಯನ್ನು ಸ್ಥಾಪಿಸಿತ್ತು. ಈ ಎಲ್ಲಾ ಕಚೇರಿಗಳನ್ನು ಪೊಲೀಸರು ಸೀಲ್ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಯಾವುದೇ ಕಂಪನಿಯು ಹಣಕಾಸು ವಹಿವಾಟಿಗೆ ನೋಂದಣಿಯಾಗದಿದ್ದರೆ ಅದರೊಟ್ಟಿಗೆ ವ್ಯಾಪಾರ ವಹಿವಾಟು ಮಾಡದಿರಿ ಎಂದು ಎಸ್ಪಿ ಜನರಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕ್ರಿಪ್ಟೊ ಹಗರಣ; ಎಸ್ಐಟಿಯಿಂದ ನಾಲ್ವರು ಪೊಲೀಸರು ಸೇರಿ 8 ಜನರ ಬಂಧನ