ಜಲ್ಪೈಗುರಿ (ಪಶ್ಚಿಮ ಬಂಗಾಳ): ಸರ್ಕಾರದ ಉನ್ನತ ಅಧಿಕಾರಿಯಾಗಬೇಕು. ಐಎಎಸ್, ಐಪಿಎಸ್ ಹುದ್ದೆಗೆ ಏರಬೇಕೆಂಬ ಆಸೆಯನ್ನು ಬಾಲ್ಯದಲ್ಲೇ ಬಹುತೇಕ ವಿದ್ಯಾರ್ಥಿಗಳು ಕಂಡಿರುತ್ತಾರೆ. ಆದರೆ, ಯಾವುದೋ ಕಾರಣ, ಸಮಸ್ಯೆ ಹಾಗೂ ನಾನಾ ಅಡತಡೆಗಳು ಬಹುಪಾಲು ವಿದ್ಯಾರ್ಥಿಗಳ ಕನಸನ್ನು ಅರ್ಧದಲ್ಲಿ ಕಮರಿ ಹೋಗುವಂತೆ ಮಾಡುತ್ತವೆ. ಇದರ ನಡುವೆಯೂ ಛಲವೊಂದಿದ್ದರೆ ಏನಾದರೂ ಸಾಧಿಸಬಹುದು ಎಂಬ ಎಷ್ಟೋ ನಿದರ್ಶನಗಳನ್ನು ನಾವು ಕಂಡಿದ್ದೇವೆ. ಜೀವನದಲ್ಲಿ ಎದುರಾಗುವ ಎಂತಹದ್ದೇ ಅಡ್ಡಿ ಮತ್ತು ಆತಂಕಗಳನ್ನು ಮೆಟ್ಟಿ ನಿಲ್ಲಬಹುದು ಎಂಬುವುದಕ್ಕೆ ಇದುವರೆಗೆ ಅನೇಕರು ಸಾಕ್ಷಿಯಾಗಿದ್ದಾರೆ.
ಇಂತಹ ಸ್ಫೂರ್ತಿ ಮತ್ತು ಪ್ರತಿಭಾವಂತರಲ್ಲಿ ಪಶ್ಚಿಮ ಬಂಗಾಳದ ಜಲ್ಪೈಗುರಿಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮೇಶ್ ಗಣಪತ್ ಖಂಡಬಹಲ್ ಕೂಡ ಒಬ್ಬರಾಗಿದ್ದಾರೆ. ಹೌದು, ಮಹಾರಾಷ್ಟ್ರದ ಮೂಲದ ಉಮೇಶ್ 2003ರಲ್ಲಿ 12ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರು. ಇಂಗ್ಲಿಷ್‌ನಲ್ಲಿ ಕೇವಲ 21 ಅಂಕಗಳನ್ನು ಮಾತ್ರ ಪಡೆದಿದ್ದರು. ಇನ್ನೇನು ಇಲ್ಲಿಗೆ ಶೈಕ್ಷಣಿಕ ಜೀವನ ಮುಗಿತು ಎಂದೇ ಭಾವಿಸಿದ್ದರು. ಅಲ್ಲದೇ, ಮುಂದಿನ ಓದಿನ ಆಸೆ ಬಿಟ್ಟು ಬೇಸಾಯ ಮಾಡಲು ಅಣಿಯಾಗಿದ್ದರು. ಆದರೆ, ಇಂದು ಅದೇ ಉಮೇಶ್ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ್ದಾರೆ. ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ ಪಾಸ್ ಮಾಡಿ ಐಪಿಎಸ್ ಅಧಿಕಾರಿಯಾಗಿದ್ದಾರೆ.
ಅನುತ್ತೀರ್ಣವೇ ಅಂತ್ಯವಲ್ಲ: ಉಮೇಶ್ ಗಣಪತ್ 12ನೇ ತರಗತಿಯಲ್ಲಿ ಫೇಲ್ ಆದ ನಂತರ ಮಹಿರವಾಣಿ ಗ್ರಾಮದಲ್ಲಿ ಕೃಷಿಕರಾಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷ ಹೀಗೇ ತಮ್ಮ ತಂದೆಯೊಂದಿಗೆ ಕೃಷಿಯಲ್ಲಿ ತೊಡಗಿದ್ದರು. ಆದರೆ, ಸ್ನೇಹಿತರ ಸಲಹೆ ಮೇರೆಗೆ ನಿರ್ಧಾರ ಬದಲಿಸಿಕೊಂಡು ಉಮೇಶ್ ಮತ್ತೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸುವ ಬಗ್ಗೆ ಯೋಚನೆ ಮಾಡಿದರು. ಈ ಮೂಲಕ ಪರೀಕ್ಷೆಯ ಅನುತ್ತೀರ್ಣವೇ ಜೀವನದ ಅಂತ್ಯವಲ್ಲ ಎಂಬುವದನ್ನು ನಿರೂಪಿಸಿದ್ದಾರೆ. ದೃಢವಾದ ಮನಸ್ಸು ಮತ್ತು ಸ್ಥಿರವಾದ ಗುರಿಯು ನಮ್ಮಲ್ಲಿ ಯಾವುದೇ ಬದಲಾವಣೆಯನ್ನು ಮಾಡಬಲ್ಲದು ಎಂಬುದನ್ನು ಉಮೇಶ್ ಗಣಪತ್ ನಂಬಿದ್ದಾರೆ.
''ನನ್ನ ಬಾಲ್ಯದ ಶಿಕ್ಷಣ ನಾಸಿಕ್‌ನಲ್ಲಿ ಕಳೆದಿದೆ. ಹೈಸ್ಕೂಲ್ ಮತ್ತು ಕೆಟಿಎಚ್‌ಎಂ ಜೂನಿಯರ್ ಕಾಲೇಜಿನಲ್ಲಿ 11 ಮತ್ತು 12ನೇ ತರಗತಿ ಓದಿದೆ. ನಾನು ಯಾವಾಗಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದೆ. ಆದರೆ, ಇಂಗ್ಲಿಷ್‌ನಲ್ಲಿ ಕೇವಲ 21 ಅಂಕಗಳು ಬಂದವು. ಇದರಿಂದ ನಾನು ಪರೀಕ್ಷೆಯಲ್ಲಿ ಅನುತ್ತೀರ್ಣನಾದೆ. ಹೀಗಾಗಿ ಇನ್ಮುಂದೆ ಓದುವುದಿಲ್ಲ ಎಂಬ ನಿರ್ಧಾರಕ್ಕೆ ಎಂದಿದ್ದೆ'' ಎಂದು ಎಸ್ಪಿ ಉಮೇಶ್ ಗಣಪತ್ ತಿಳಿಸಿದರು.
''12ನೇ ತರಗತಿ ಫೇಲ್ ಆದ ಬಳಿಕ ಎರಡು ವರ್ಷಗಳ ಕಾಲ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೆ. ಇದರ ನಡುವೆ ಕೆಲ ಗೆಳೆಯರು ಓದಿನ ಬಗ್ಗೆ ಸಲಹೆ ನೀಡಿದರು. ಹೀಗಾಗಿ, ನನ್ನ ನಿರ್ಧಾರ ಬದಲಿಸಿಕೊಂಡೆ. ಈ ಮೊದಲು ವಿಜ್ಞಾನ ವಿದ್ಯಾರ್ಥಿಯಾಗಿದ್ದೆ. ನಂತರ ನಾನು ಕಲಾ ವಿಭಾಗಕ್ಕೆ ಹೋದೆ. ಪುಣೆ ವಿಶ್ವವಿದ್ಯಾಲಯದಿಂದ ಬಿಎ ಮತ್ತು ಎಂಎ ಮಾಡಿದೆ. ಇದರ ನಡುವೆ ನಾನು ಈ ಹಿಂದೆ ವಿಜ್ಞಾನ ವಿದ್ಯಾರ್ಥಿಯಾಗಿದ್ದ ಕಾರಣ ಮಹಾರಾಷ್ಟ್ರ ಮುಕ್ತ ವಿವಿಯಲ್ಲಿ ತೋಟಗಾರಿಕೆಯಲ್ಲಿ ಬಿಎಸ್ಸಿ ಮಾಡಿದೆ'' ಎಂದು ಹೇಳಿದರು.
''ಇಷ್ಟೊಂದು ಓದಿದ ಮೇಲೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಲು ಆರಂಭಿಸಿದೆ. ಪಿಎಸ್ಐ ಪರೀಕ್ಷೆ ಪಡೆದು ಮೊದಲ ಪ್ರಯತ್ನದಲ್ಲೇ ಉತ್ತೀರ್ಣನಾದೆ. ಇದರಿಂದ ಮುಂದೆ ಐಪಿಎಸ್ ಮಾಡುವ ಸ್ಫೂರ್ತಿ ಕೂಡ ನನ್ನಲ್ಲಿ ಬಂತು. ಅಲ್ಲಿಂದ 2012ರಲ್ಲಿ ಯುಪಿಎಸ್‌ಸಿ ಓದಲು ದೆಹಲಿಗೆ ತೆರಳಿದೆ. 2015ರಲ್ಲಿ 704 ರ್ಯಾಂಕ್ನೊಂದಿಗೆ ಯುಪಿಎಸ್‌ಸಿ ಪರೀಕ್ಷೆ ಕೂಡ ತೇರ್ಗಡೆಯಾದೆ. ನಮ್ಮ ಹಳ್ಳಿಯಲ್ಲಿ ಐಪಿಎಸ್ ಪಾಸಾದ ಮೊದಲ ವ್ಯಕ್ತಿ ನಾನು'' ಎಂದು ವಿವರಿಸಿದರು.
ಸದ್ಯ ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಉಮೇಶ್ ಗಣಪತ್, ಉತ್ತರ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾರೆ. ಕೂಚ್ ಬೆಹಾರ್ ಜಿಲ್ಲೆಯ ಎಸ್‌ಡಿಪಿಒ ಆಗಿ ಸೇವೆ ಸಲ್ಲಿಸಿದ ನಂತರ, 2020ರಲ್ಲಿ ಅಲಿಪುರ್‌ದುವಾರ್ ಜಿಲ್ಲೆಯಲ್ಲಿ ಹೆಚ್ಚುವರಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದರು. ಇದೇ ಮಾರ್ಚ್ನಲ್ಲಿ ಜಲ್ಪೈಗುರಿಯ ಎಸ್ಪಿ ಆಗಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಇದನ್ನೂ ಓದಿ: ಆರು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಫೇಲ್; ಸೋಲೇ ಗೆಲುವಿನ ಮೆಟ್ಟಿಲೆಂದು ಏಳನೇ ಬಾರಿಗೆ ಐಪಿಎಸ್ ಆದ ಸಾಧಕ