ಹೈದರಾಬಾದ್: ತೆಲಂಗಾಣ ಹೈಕೋರ್ಟ್ ಬಳಿ ಭೀಕರ ಹತ್ಯೆಯೊಂದು ನಡೆದಿದೆ. ಹೈಕೋರ್ಟ್‌ನ ಗೇಟ್ ಸಂಖ್ಯೆ 6 ರಲ್ಲಿ ವ್ಯಕ್ತಿಯೊಬ್ಬನನ್ನು ದುಷ್ಕರ್ಮಿಗಳು ಬರ್ಬರವಾಗಿ ಇರಿದು ಕೊಂದಿದ್ದಾರೆ. ಜನರು ನೋಡುತ್ತಿರುವಾಗಲೇ ವ್ಯಕ್ತಿಗೆ ಚಾಕುವಿನಿಂದ ಇರಿಯಲಾಗಿದೆ.
10 ಸಾವಿರ ರೂಪಾಯಿಗೆ ಇಬ್ಬರ ನಡುವೆ ಮಾರಾಮಾರಿ ನಡೆದಿದೆಯಂತೆ. ಈ ಘಟನೆಯನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿ ಪೊಲೀಸರು ಘಟನಾ ಸ್ಥಳವನ್ನು ಪರಿಶೀಲನೆ ನಡೆಸಿ ಮಾಹಿತಿ ಸಂಗ್ರಹಿಸಿದರು. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದರು. ಮೃತರನ್ನು ಮಿಥುನ್ ಎಂದು ಗುರುತಿಸಲಾಗಿದ್ದು, ಇಲ್ಲಿನ ಸುಲಭ್ ಕಾಂಪ್ಲೆಕ್ಸ್‌ನಲ್ಲಿ ಕೆಲಸ ಮಾಡುತ್ತಿದ್ದನು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿದ್ಯುತ್ ಶಾಕ್ನಿಂದ ರೈತ ಸಾವು: ಕಾಡುಪ್ರಾಣಿಗಳಿಂದ ಬೆಳೆಗಳನ್ನು ರಕ್ಷಿಸಲು ಅಳವಡಿಸಿದ್ದ ರಕ್ಷಣಾ ತಂತಿ ರೈತನೊಬ್ಬರ ಪ್ರಾಣವನ್ನು ಬಲಿ ತೆಗೆದುಕೊಂಡಿದೆ. ರಭಸವಾಗಿ ಬೀಸಿದ ಗಾಳಿಗೆ ವಿದ್ಯುತ್ ಕಂಬ ನೆಲಕ್ಕೆ ಬಿದ್ದಿದೆ. ಈ ವೇಳೆ ವಿದ್ಯುತ್ ತಂತಿಗಳು ರಕ್ಷಣಾ ತಂತಿಗಳ ಮೇಲೆ ಬಿದ್ದಿದ್ದರಿಂದ ಈ ಅವಘಡ ಸಂಭವಿಸಿದೆ. ನಿರ್ಮಲ್ ಜಿಲ್ಲೆಯ ಮುಥೋಲ್ ತಾಲೂಕಿನ ಮಚ್ಚಲ್ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ.
ಪೊಲೀಸರು ಹಾಗೂ ಸ್ಥಳೀಯರು ನೀಡಿರುವ ವಿವರದ ಪ್ರಕಾರ, ಮಚ್ಕಲ್ ಗ್ರಾಮದ ರೈತ ಸೂರ್ಯವಂಶಿ ಆನಂದ ರಾವ್ (68) ಎಂಬುವರು ತಮ್ಮ ಶೇಂಗಾ ಬೆಳೆ ರಕ್ಷಿಸಿಕೊಳ್ಳಲು ಹೊಲದ ಸುತ್ತ-ಮುತ್ತ ರಕ್ಷಣಾ ತಂತಿಯನ್ನು ಅಳಡಿಸಿದ್ದರು. ಮಂಗಳವಾರ ರಾತ್ರಿ ಇವರ ಜಮೀನಿನಲ್ಲಿ ವಿದ್ಯುತ್ ಪೂರೈಕೆಗಾಗಿ ನಿರ್ಮಿಸಿದ್ದ ಕಂಬವೊಂದು ನೆಲಕ್ಕೆ ಉರುಳಿ ಬಿದ್ದಿದೆ. ಆ ಕಂಬದ ತಂತಿಗಳು ರಕ್ಷಣಾ ತಂತಿ ಮೇಲೆ ಬಿದ್ದಿವೆ. ಇದನ್ನು ಗಮನಿಸದ ರೈತ ಪ್ರತಿ ದಿನದಂತೆ ಬುಧವಾರ ಬೆಳಗ್ಗೆ ಒಡ್ಡಿನಲ್ಲಿ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ತಂತಿ ತಗುಲಿದೆ. ಆ ತಂತಿಗೆ ವಿದ್ಯುತ್ ಪೂರೈಕೆಯಾಗಿದ್ದರಿಂದ ರೈತ ಆನಂದ ರಾವ್ಗೆ ವಿದ್ಯುತ್ ತಗುಲಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆ ಮಾರ್ಗವಾಗಿ ಹೋದ ಕೆಲವರು ಗಮನಿಸಿ ಕುಟುಂಬಸ್ಥರು ಹಾಗೂ ವಿದ್ಯುತ್ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.
ವೃದ್ಧ ದಂಪತಿ ಕೊಲೆ: ಜಾರ್ಖಂಡ್ ರಾಜ್ಯದ ಲತೇಹರ್ ಜಿಲ್ಲೆಯ ಚಾಂದ್ವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗ್ರಾಮಸ್ಥರ ವಿರುದ್ಧ ವಾಮಾಚಾರ ನಡೆಸುತ್ತಿದ್ದ ಆರೋಪದ ಮೇಲೆ ವೃದ್ಧ ದಂಪತಿಯನ್ನು ಸ್ಥಳೀಯರು ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ಬುಧವಾರ ಬಹಿರಂಗಪಡಿಸಿದ್ದಾರೆ. ಸುಮಾರು 12 ಜನ ಗ್ರಾಮಸ್ಥರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಿಬಲ್ ಗಂಜು ಮತ್ತು ಬೋನೆದೇವಿ ಎಂಬ ವೃದ್ಧ ದಂಪತಿಗಳು ಸಮೀಪದ ಫೈಸಲ್ ಗ್ರಾಮದಲ್ಲಿ ವಾಸಿಸುತ್ತಿದ್ದರು. ಈ ಗ್ರಾಮದಲ್ಲಿ ಮಂಗಳವಾರ ರಾತ್ರಿ ಪಂಚಾಯಿತಿ ನಡೆದಿದೆ. ಇದರಲ್ಲಿ ಮಾಡಿದ ನಿರ್ಣಯದಂತೆ ದೊಣ್ಣೆಯಿಂದ ತೀವ್ರವಾಗಿ ಥಳಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಓದಿ: ಮಣಿಪುರದಲ್ಲಿ ಭುಗಿಲೆದ್ದ 'ಮೀಸಲಾತಿ' ಹಿಂಸಾಚಾರ: 7,500 ಜನರ ಸ್ಥಳಾಂತರ.. ಸಿಎಂ ಜೊತೆ ಶಾ ಮಾತುಕತೆ