ಪ್ರಥಮ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವಯಸ್ಸಾದ ದಂಪತಿಗೆ ವ್ಯಕ್ತಿಯೊಬ್ಬರು ಸಹಾಯ ಮಾಡಿ, ಆ ವಿಡಿಯೋವನ್ನು ತಮ್ಮ ಲಿಂಕ್ಡ್ಇನ್ನಲ್ಲಿ ಶೇರ್ ಮಾಡಿದ್ದಾರೆ. ಈಗ ಆ ವಿಡಿಯೋ ಸಿಕ್ಕಾಪಟ್ಟೇ ವೈರಲ್ ಆಗುತ್ತಿದೆ.
ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ದಂಪತಿಗೆ ವಿಮಾನ ಹತ್ತಲು ವ್ಯಕ್ತಿಯೊಬ್ಬರು ಸಹಾಯ ಮಾಡಿದ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಸಹಾಯ ಮಾಡಿದ ವ್ಯಕ್ತಿಯು ಆ ವಿಡಿಯೋವನ್ನು ಲಿಂಕ್ಡ್ಇನ್ನಲ್ಲಿ ಪೋಸ್ಟ್ ಮಾಡಿದ ನಂತರ ನೆಟಿಜನ್‌ಗಳಿಂದ ಬಹಳಷ್ಟು ಪ್ರಶಂಸೆ ಪಡೆಯುತ್ತಿದ್ದಾರೆ. ಆ ವ್ಯಕ್ತಿಯು ದಂಪತಿಗೆ ಗೊತ್ತಾಗದೆ ಅವರಿಗಾಗಿ ಆಹಾರವನ್ನು ಕೂಡ ಖರೀದಿಸಿ ನೀಡಿದ್ದರು.
ಲಿಂಕ್ಡ್‌ಇನ್ ಬಳಕೆದಾರ ಅಮಿತಾಭ್ ಶಾ ಎಂಬುವರು ಕಾನ್ಪುರದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಬೋರ್ಡಿಂಗ್ ಏರಿಯಾದಲ್ಲಿ ವಯಸ್ಸಾದ ದಂಪತಿಯನ್ನು ನೋಡಿದರು. ದೂರದ ಉತ್ತರ ಪ್ರದೇಶದ ಹಳ್ಳಿಯೊಂದರಿಂದ ಎಂಟು ಗಂಟೆಗಳ ಕಾಲ ಪ್ರಯಾಣಿಸಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಅವರು ಸಾಕಷ್ಟು ದಣಿದಂತೆ ತೋರುತ್ತಿದ್ದರು. ಅಲ್ಲದೆ ವಿಮಾನ ನಿಲ್ದಾಣದಲ್ಲಿ ಎತ್ತ ಹೋಗಬೇಕೆಂದು ತಿಳಿಯದೆ ಗೊಂದಲಕ್ಕೀಡಾಗಿದ್ದರು. ಇದನ್ನು ಗಮನಿಸಿದ ಶಾ, ತಕ್ಷಣ ಅವರ ಬಳಿಗೆ ಹೋಗಿ ಅವರಿಗೆ ವಿಮಾನ ಹತ್ತಲು ಸಹಾಯ ಮಾಡಿದರು.
ಬೋರ್ಡಿಂಗ್ ಏರಿಯಾದಲ್ಲಿದ್ದ ಅವರು ಸಂಪೂರ್ಣ ಗೊಂದಲದಲ್ಲಿದ್ದರು. ಇದು ಅವರ ಪ್ರಥಮ ವಿಮಾನ ಪ್ರಯಾಣ ಎಂಬುದು ಅವರನ್ನು ನೋಡಿದರೆ ಗೊತ್ತಾಗುತ್ತಿತ್ತು. ಅವರ ಹತ್ತಿರ ಹೋಗಿ ಒಂದು ಮುಗುಳ್ನಗೆ ಬೀರಿ ಸುಮ್ಮನೆ ನನ್ನನ್ನು ಹಿಂಬಾಲಿಸಿ ಎಂದು ಅವರಿಗೆ ಹೇಳಿದೆ ಎಂದು ಶಾ ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿಮಾನದೊಳಗೆ ಅವರು ನನ್ನ ಮುಂದೆಯೇ ಕುಳಿತಿದ್ದರು. ಆಗ ತಮ್ಮ ಫೋಟೊ ಕ್ಲಿಕ್ಕಿಸಿ ತಮ್ಮ ಮಗಳಿಗೆ ವಾಟ್ಸ್ಆ್ಯಪ್ ಮಾಡುವಂತೆ ಆಂಟಿ ನನಗೆ ಕೇಳಿಕೊಂಡರು. ಅವರು ಹೇಳಿದಂತೆಯೇ ನಾನು ಮಾಡಿದೆ ಎಂದು ಶಾ ಲಿಂಕ್ಡ್ಇನ್ನಲ್ಲಿ ಬರೆದಿದ್ದಾರೆ.
ತುಂಬಾ ಬಳಲಿದಂತೆ ಮತ್ತು ಹಸಿದವರಂತೆ ಕಾಣುತ್ತಿದ್ದ ಹಿರಿಯರಿಗೆ ಶಾ ತಿಂಡಿ ಮತ್ತು ಜ್ಯೂಸ್ ಅನ್ನು ಸಹ ತಂದು ಕೊಟ್ಟಿದ್ದಾರೆ. ಆದರೆ ಇದಕ್ಕಾಗಿ ತಾನು ಹಣ ಪಾವತಿಸಿದ್ದೇನೆ ಎಂಬುದನ್ನು ಮಾತ್ರ ಅವರಿಗೆ ತಿಳಿಯದಂತೆ ಅವರು ನೋಡಿಕೊಂಡಿದ್ದಾರೆ.
ಏರ್ ಹಾಸ್ಟೆಸ್ ಬಂದಾಗ ಅವರು ತಮಗೇನೂ ಬೇಡ ಎಂದರು. ಆದರೆ ಅವರು ಹಸಿದಿದ್ದು ಸ್ಪಷ್ಟವಾಗಿತ್ತು. ಹೀಗಾಗಿ ಅವರಿಗೆ ಪನೀರ್ ಸ್ಯಾಂಡವಿಚ್ ಮತ್ತು ಜ್ಯೂಸ್ ತರುವಂತೆ ಏರ್ ಹಾಸ್ಟೆಸ್ಗೆ ಹೇಳಿದೆ. ಆದರೆ ಇದೆಲ್ಲವೂ ನಿಮಗೆ ಉಚಿತವಾಗಿ ಸಿಗುತ್ತಿದೆ ಎಂದು ಹಿರಿಯ ದಂಪತಿಗೆ ನಂಬಿಸಿದೆ. ಇದೆಲ್ಲದಕ್ಕೂ ಅವರಿಗೆ ತಿಳಿಯದಂತೆ ನಾನು ಹಣ ಪಾವತಿಸಿದೆ ಎಂದು ಶಾ ಹೇಳಿದ್ದಾರೆ.
ವಿಮಾನ ಇಳಿದ ನಂತರ ಅವರು ಸುಮ್ಮನೆ ಒಂದು ಬಾರಿ ಸ್ಮೈಲ್ ಮಾಡಿ ತಮ್ಮ ಗಮ್ಯದತ್ತ ಹೋದರು. ಇದೊಂದು ಅದ್ಭುತ ಗುರುವಾರವಾಗಿತ್ತು. ಅವಕಾಶ ಸಿಕ್ಕಾಗಲೆಲ್ಲ ನಾವು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂದು ಶಾ ಬರೆದಿದ್ದಾರೆ.
ಇದನ್ನೂ ಓದಿ: ನೀಲಿ ತಾರೆಯಾಗಿ ಬೆಳಕಿಗೆ ಬಂದ ಸನ್ನಿ ಲಿಯೋನ್ ಸಮಾಜಮುಖಿ ಕೆಲಸದ ಬಗ್ಗೆ ಗೊತ್ತಾ?