ಕಾನ್ಪುರ(ಉತ್ತರ ಪ್ರದೇಶ): ಗುಜರಾತಿನಲ್ಲಿ ಹಾವು ಕಡಿತಕ್ಕೊಳಗಾದ ಯುವಕನೊಬ್ಬ ಚಿಕಿತ್ಸೆಗಾಗಿ ಸುಮಾರು 1,300 ಕಿ.ಮೀ ಕ್ರಮಿಸಿ ಉತ್ತರ ಪ್ರದೇಶದ ಕಾನ್ಪುರ ತಲುಪಿ ಬದುಕುಳಿದಿರುವ ಅಚ್ಚರಿಯ ಘಟನೆ ನಡೆದಿದೆ. ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮ ಫತೇಪುರದ ಸುನಿಲ್ ಕುಮಾರ್ (20) ನೇ ಹೀಗೆ ಬದುಕುಳಿದ ಯುವಕನಾಗಿದ್ದಾನೆ.
ಈತ ಗುಜರಾತ್ನ ರಾಜ್ಕೋಟ್ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆಗಸ್ಟ್ 15ರಂದು ಆತನಿಗೆ ಹಾವು ಕಚ್ಚಿದೆ. ತಕ್ಷಣವೇ ಅವನನ್ನು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಆದರೆ, ಸುನಿಲ್ ಆರೋಗ್ಯ ಹಾವು ಕಡಿತದಿಂದ ಹದಗೆಡುತ್ತಾ ಹೊರಟಿತ್ತು. ಅಲ್ಲದೆ ಆತ ಪ್ರಜ್ಞಾಹೀನಾಗಿದ್ದ. ಕುಟುಂಬದವರಿಗೆಲ್ಲ ಒಂದು ಬಾರಿ ಹೃದಯ ಬಡಿತ ನಿಂತಂತಾಗಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತಡಮಾಡದೇ ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ಕರೆದೊಯ್ಯಲು ನಿರ್ಧರಿಸಿದರು.
ಆದರೆ, ಗುಜಾರತ್ನಿಂದ ಉತ್ತರಪ್ರದೇಶದ ಕಾನ್ಪುರ ಆಸ್ಪತ್ರೆಗೆ ಸುಮಾರು 1.300 ಕಿ.ಮೀ ದೂರವಿದೆ. ಈ ತುರ್ತು ಪರಿಸ್ಥಿತಿಯಲ್ಲಿ ಅಷ್ಟು ದೂರ ಕ್ರಮಿಸಿ ಸುನಿಲ್ನನ್ನು ಉಳಿಸಿಕೊಳ್ಳುವುದು ಕುಟುಂಬದವರಿಗೆ ಸವಾಲಾಗಿತ್ತು. ತಕ್ಷಣವೇ ಗುಜರಾತ್ನಲ್ಲಿ 51,000 ರೂಪಾಯಿಗಳಿಗೆ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ಆಂಬ್ಯುಲೆನ್ಸ್ನ್ನು ಬಾಡಿಗೆಗೆ ಪಡೆದು ಸುನಿಲ್ನ್ನು 1300 ಕಿಮೀ ಪ್ರಯಾಣಿಸಿ ಲಾಲಾ ಲಜಪತ್ ರಾಯ್ ಆಸ್ಪತ್ರೆಗೆ ದಾಖಲಿಸಿದರು.
ಆಸ್ಪತ್ರೆಗೆ ತಲುಪಿದ ಕೂಡಲೇ ಸುನಿಲ್ನನ್ನು ವೆಂಟಿಲೇಟರ್‌ನಲ್ಲಿರಿಸಿ ಚಿಕಿತ್ಸೆ ಆರಂಭಿಸಲಾಯಿತು. ತುರ್ತು ಚಿಕಿತ್ಸೆ ನೀಡಿ ಪ್ರತಿ ನಿಮಿಷ ಸುನಿಲ್ ಆರೋಗ್ಯದ ಮೇಲೆ ನಿಗಾ ಇಡಲಾಯಿತು. ಅದೃಷ್ಟವಶಾತ್ ಸುನಿಲ್ ನಿಧಾನವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಾ ಚೇತರಿಸಿಕೊಳ್ಳಲು ಪ್ರಾರಂಭಿಸಿದರು. ಅಂತಿಮವಾಗಿ ಶನಿವಾರ ಆತನಿಗೆ ಅಳವಡಿಸಿದ್ದ ವೆಂಟಿಲೇಟರ್ನ್ನು ತೆಗೆಯಲಾಗಿದೆ.
ಈ ಕುರಿತು ಲ್ ಎಲ್ ಆರ್ ನ ಹಿರಿಯ ವೈದ್ಯ ಡಾ.ಬಿ.ಪಿ.ಪ್ರಿಯದರ್ಶಿ ಪ್ರತಿಕ್ರಿಯೆ ನೀಡಿದ್ದು, "ಆಗಸ್ಟ್ 17ರ ರಾತ್ರಿ ರೋಗಿಯನ್ನು ನಮ್ಮ ಆಸ್ಪತ್ರೆಗೆ ಕರೆತರಲಾಯಿತು. ಆ ಸಂದರ್ಭದಲ್ಲಿ ಆತನ ಸ್ಥಿತಿ ತುಂಬಾ ಗಂಭೀರವಾಗಿತ್ತು. ಹಾವಿನ ವಿಷ ದೇಹವನ್ನು ಆವರಿಸಿ, ಅಂತಿಮ ಹಂತಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ತಡ ಮಾಡದೇ ಅವರಿಗೆ ವೆಂಟಿಲೇಟರ್ ಅಳವಡಿಸಿ ಆ್ಯಂಟಿ ವೆನಮ್ ಮತ್ತಿತರ ಔಷಧಗಳನ್ನು ನೀಡಲಾಯಿತು. ಸುನಿಲ್ ಸ್ಥಿತಿ ಈಗ ಸುಧಾರಿಸಿದೆ. ಅವರನ್ನು ವೆಂಟಿಲೇಟರ್‌ನಿಂದ ಹೊರತೆಗೆದು ಐಸಿಯು ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ. ಸಂಪೂರ್ಣ ಗುಣಮುಖವಾಗಿಲ್ಲ,ಆದರೆ ಜೀವ ಈಗ ಅಪಾಯದಿಂದ ಪಾರಾಗಿದೆ" ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಹಾವು ಕಡಿತಕ್ಕೆ ಒಳಗಾದ ವ್ಯಕ್ತಿಗಳು ಶೇಕಡಾ 75 ರಷ್ಟು ಜನ ತಮಗೆ ಹಾವು ಕಚ್ಚಿದೆ ಎಂಭ ಭಯದಿಂದಲೇ ಸಾವನ್ನಪ್ಪುತ್ತಾರೆ. ಹಾವು ಕಚ್ಚಿದ್ದಾಗ ಭಯಗೊಂಡರೇ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ. ಇದರಿಂದ ದೇಹ ಸೇರಿರುವ ಹಾವಿನ ವಿಷ ಬೇಗ ನಿಮ್ಮ ರಕ್ತನಾಳಗಳ ಮೂಲಕ ದೇಹದ ತುಂಬೆಲ್ಲ ಪಸರಿಸುತ್ತದೆ. ಪರಿಣಾಮ ಬೇಗ ಉಸಿರು ಚೆಲ್ಲುವ ಸಾಧ್ಯತೆ ಹೆಚ್ಚು ಅಂತಾ ತಜ್ಞರು.
ಇದನ್ನೂ ಓದಿ: ಮಾಂತ್ರಿಕನ ಮಾತು ಕೇಳಿ ಹಾವು ಕಚ್ಚಿದ ಬಾಲಕಿಯನ್ನು ಸಗಣಿ, ಬೇವಿನ ಸೊಪ್ಪಿನಲ್ಲಿ ಹೂತಿಟ್ಟು ಹುಚ್ಚಾಟ!