ಪಣಜಿ(ಗೋವಾ): ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಂಗಾಳ ಚುನಾವಣೆಯಲ್ಲಿ ಕಠಿಣ ಹೋರಾಟದ ಮೂಲಕ ಗೆದ್ದಿರಬಹುದು.
ಅದು ಭಾರತೀಯ ಜನತಾ ಪಕ್ಷದ ಸೋಲಿನಲ್ಲಿ ಕೊನೆಗೊಂಡಿದೆ. ಆದರೆ, ಬಿಜೆಪಿಯನ್ನು ತೆಗೆದುಕೊಳ್ಳುವ ಅವರ ದೃಷ್ಟಿಕೋನವು ಸಂಕುಚಿತ ಎಂದು ಕೇಂದ್ರ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ.
ಕಳೆದ ವಾರ ಗೋವಾದಲ್ಲಿ ಬಂಗಾಳ ಸಿಎಂ ಬ್ಯಾನರ್ಜಿ ನೀಡಿರುವ ಹೇಳಿಕೆಗಳ ಬಗ್ಗೆ ಪಣಜಿಯಲ್ಲಿ ಪ್ರತಿಕ್ರಿಯಿಸಿದ ಅವರು, ಬಂಗಾಳದಲ್ಲಿ ಬ್ಯಾನರ್ಜಿ ಅವರು ಕಠಿಣ ಹೋರಾಟ ನಡೆಸಿ ಗೆದ್ದಿದ್ದಾರೆ ಎಂಬುದಕ್ಕೆ ನನ್ನದೇನು ತಕರಾರು ಇಲ್ಲ.
ಆದರೆ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಕೇರಳ, ಕರ್ನಾಟಕ, ಅಸ್ಸೋಂನಲ್ಲಿ ನರೇಂದ್ರ ಮೋದಿ ವಿರುದ್ಧ ಹೋರಾಡುತ್ತಿರುವವರು ಯಾರು? ಅದು ಕಾಂಗ್ರೆಸ್. ಬೆಂಗಾಲ್ ಲೆನ್ಸ್ ಹಾಕಿಕೊಂಡು ಅವರು ಇದನ್ನು ನೋಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ನೀವು ಇಡೀ ದೇಶವನ್ನು ನೋಡಿದಾಗ, ನರೇಂದ್ರ ಮೋದಿ ಅವರ ವಿರುದ್ಧ ಹೋರಾಟ, ಟ್ವೀಟ್, ಪತ್ರಿಕಾಗೋಷ್ಠಿ, ಆಂದೋಲನಗಳನ್ನು ಮಾಡುತ್ತಾ ಮುಂಚೂಣಿಯಲ್ಲಿರುವ ಪಕ್ಷ ಕಾಂಗ್ರೆಸ್ ಎಂದು ಮಮತಾ ಬ್ಯಾನರ್ಜಿಗೆ ಚಿದಂಬರಂ ತಿರುಗೇಟು ನೀಡಿದ್ದಾರೆ.
ಪಣಜಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, ಪ್ರಾದೇಶಿಕ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿಗೆ ನಿರ್ಧಾರ ಕೈಗೊಳ್ಳದಿರುವುದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತಷ್ಟು ಶಕ್ತಿಶಾಲಿಯಾಗಿ ಮಾಡಿದೆ. ಇದಕ್ಕೆ ಕಾಂಗ್ರೆಸ್ ಕಾರಣ ಎಂದು ದೂರಿದ್ದರು.
2022ರ ವಿಧಾನಸಭಾ ಚುನಾವಣೆಗೆ ಮುನ್ನವೇ ಗೋವಾದಲ್ಲಿ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಚಾರ ನಡೆಸುತ್ತಿವೆ. ಇದರ ಬೆನ್ನಲ್ಲೇ ಚಿದಂಬರಂ ಹಾಗೂ ಬ್ಯಾನರ್ಜಿ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಪಿ.ಚಿದಂಬರಂ ಗೋವಾದಲ್ಲಿ 2022ಕ್ಕೆ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಸಮಿತಿಯ ಹಿರಿಯ ವೀಕ್ಷಕರಾಗಿದ್ದಾರೆ.
ಇದನ್ನೂ ಓದಿ: ರಾಜಕೀಯದಲ್ಲಿ ಕಾಂಗ್ರೆಸ್ ಗಂಭೀರವಾಗಿಲ್ಲದಿದ್ದಕ್ಕೆ ಮೋದಿ ಶಕ್ತಿಶಾಲಿ: ಮಮತಾ ಬ್ಯಾನರ್ಜಿ