ಮುಂಬೈ : ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮುಂಬೈನಲ್ಲಿಂದು ನ್ಯಾಷನಲ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಈ ಇಬ್ಬರು ನಾಯಕ ಭೇಟಿಯನ್ನು ಸ್ವಾಗತಿಸಿರುವ ಶಿವಸೇನಾ ನಾಯಕ ಸಂಜಯ್ ರಾವತ್, ಇದು ದೊಡ್ಡ ವಿಷಯವಾಗಿದೆ. ಸಭೆಯಿಂದ ಒಳ್ಳೆ ವಿಚಾರಗಳು ಹೊರ ಬರುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಶರದ್ ಪವಾರ್ ಈ ಕಾಲದ ಅತ್ಯಂತ ಅನುಭವಿ ನಾಯಕ. ಅವರು ಮಮತಾ ಬ್ಯಾನರ್ಜಿಗೆ ಮಾರ್ಗದರ್ಶನ ನೀಡಿದರೆ, ಇತರೆ ವಿಚಾರಗಳ ಬಗ್ಗೆ ಚರ್ಚೆ ನಡೆದಿದ್ದರೆ ಖಂಡಿತವಾಗಿಯೂ ಅದರಿಂದ ಏನಾದರೂ ಒಳ್ಳೆಯದು ಹೊರ ಹೊಮ್ಮುತ್ತದೆ. ಬಿಜೆಪಿ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಡಬೇಕು ಎಂದು ಸಂಜಯ್ ರಾವತ್ ತಿಳಿಸಿದ್ದಾರೆ.
ನಿನ್ನೆ ಮುಂಬೈನಲ್ಲಿ ಶಿವಸೇನಾ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರನ್ನು ಬ್ಯಾನರ್ಜಿ ಭೇಟಿಯಾಗಿದ್ದರು. ಮಹಾರಾಷ್ಟ್ರ ಪ್ರವಾಸದಲ್ಲಿರುವ ಬ್ಯಾನರ್ಜಿ ಅವರು ಈ ಹಿಂದೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿಯಾಗಬೇಕಿತ್ತು.
ಆದರೆ, ಸಿಎಂ ಅವರ ಅನಾರೋಗ್ಯದ ಕಾರಣ ಅವರ ಪುತ್ರ ಆದಿತ್ಯ ಅವರನ್ನು ಭೇಟಿ ಮಾಡಿದ್ದರು. ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಒಗ್ಗಟ್ಟಿನ ಭಾಗವಾಗಿ ಟಿಎಂಸಿ ನಾಯಕಿ ವಿಪಕ್ಷಗಳ ಅಗ್ರ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ.
ಬ್ಯಾನರ್ಜಿ ಅವರು ನಿನ್ನೆ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. 2008ರ ಮುಂಬೈ ಭಯೋತ್ಪಾದಕ ದಾಳಿಯ ಸಂದರ್ಭದಲ್ಲಿ ಭಯೋತ್ಪಾದಕರ ವಿರುದ್ಧ ಹೋರಾಡಿ ಮಡಿದ ಪೊಲೀಸ್ ಪೇದೆ ತುಕಾರಾಂ ಓಂಬಳೆ ಅವರ ಸ್ಮಾರಕಕ್ಕೆ ಗೌರವ ಸಲ್ಲಿಸಿದ್ದರು.
ಇದನ್ನೂ ಓದಿ: Winter session: ಮಮತಾ V/S ಸೋನಿಯಾ.. ವಿಪಕ್ಷಗಳಲ್ಲೇ ಬೇರೆ ಹಾದಿ ತುಳಿಯಿತೆ ಟಿಎಂಸಿ?