ನವದೆಹಲಿ: ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಹಾಗೂ ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನಡುವೆ ನಾಳೆ ಬೆಳಗ್ಗೆ 11 ಗಂಟೆಗೆ ಸಭೆ ನಡೆಯಲಿದೆ.
ಸಭೆಗೂ ಮುನ್ನ ಲಾಯ್ಡ್ ಆಸ್ಟಿನ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದು, 10.45ಕ್ಕೆ ಅವರನ್ನು ಸಭೆಗೆ ಬರಮಾಡಿಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಈ ಮಹತ್ತರ ಸಭೆಯಲ್ಲಿ ಏಷ್ಯಾ ಪೆಸಿಫಿಕ್ ರಾಷ್ಟ್ರಗಳ ಸಂಬಂಧ, ಮೇಕ್ ಇನ್ ಇಂಡಿಯಾ, ತಂತ್ರಜ್ಞಾನ ವರ್ಗಾವಣೆ, ರಕ್ಷಣಾ ಕಾರ್ಯತಂತ್ರದ ಕುರಿತು ಉಭಯ ನಾಯಕರು ಚರ್ಚಿಸಲಿದ್ದಾರೆ. ರಷ್ಯಾದ S-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆ ವಿಚಾರವನ್ನು ಕೂಡ ಸಭೆಯಲ್ಲಿ ಎತ್ತಬಹುದು ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ: ಭಾರತವನ್ನು 'ಮಹಿಳಾ ನೇತೃತ್ವದ ಅಭಿವೃದ್ಧಿ ದೇಶ'ವನ್ನಾಗಿಸಿದ ಪ್ರಧಾನಿ ಮೋದಿ: ತಿರುಮೂರ್ತಿ ಶ್ಲಾಘನೆ
ಮೂರು ದಿನಗಳ ಭೇಟಿ ನೀಡುತ್ತಿರುವ ಲಾಯ್ಡ್ ಆಸ್ಟಿನ್, ಇಂದು ಸಂಜೆ ಭಾರತಕ್ಕೆ ಆಗಮಿಸಲಿದ್ದಾರೆ. ಇಂದೇ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿ ಮಾಡಲಿದ್ದಾರೆ. ಮೂರು ದಿನಗಳ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನೂ ಭೇಟಿ ಮಾಡುವ ಸಾಧ್ಯತೆಯಿದೆ.