ಪತ್ತನಂತಿಟ್ಟ(ಕೇರಳ): ದಕ್ಷಿಣ ಭಾರತ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೇರಳದ ಶಬರಿಮಲೆಯಲ್ಲಿ ಮಕರ ಜ್ಯೋತಿಗೆ ಶನಿವಾರ ಲಕ್ಷಾಂತರ ಅಯ್ಯಪ್ಪ ಸ್ವಾಮಿ ಭಕ್ತರು ಸಾಕ್ಷಿಯಾದರು. ಮಕರ ಜ್ಯೋತಿ ದರ್ಶನ ಪಡೆದು ಅಯ್ಯಪ್ಪ ಮಾಲಾಧಾರಿಗಳು ಪುನೀತಾರದರು. ಸಂಜೆ 6.50ರ ಹೊತ್ತಿಗೆ ಮಕರ ಜ್ಯೋತಿಯ ದರ್ಶನವಾಯಿತು. ಜ್ಯೋತಿ ಕಾಣಿಸಿಕೊಳ್ಳುತ್ತಿದ್ದಂತೆ ಭಕ್ತರ ಹರ್ಷೋದ್ಘಾರ ಮುಟ್ಟಿತ್ತು. ಸ್ವಾಮಿಯೇ ಶರಣಂ ಅಯ್ಯಪ್ಪ ಎಂದು ಯಾತ್ರಿಗಳು ಜೈಕಾರ ಮೊಳಗಿಸಿದರು.
ಇದನ್ನೂ ಓದಿ: ಪುಟಾಣಿ ಅಯ್ಯಪ್ಪ ಸ್ವಾಮಿಯ ಕೈ ಹಿಡಿದ ಮುಸ್ಲಿಂ ಅಜ್ಜ.. ಮತ ಸೌಹಾರ್ದತೆಗೆ ಸಾಕ್ಷಿಯಾಯಿತು ಈ ಕಾರ್ಯ..
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಮಂಡಲ ಪೂಜೆ ಮತ್ತು ಮಕರ ವಿಳಕ್ಕು ಅತ್ಯಂತ ಪ್ರಸಿದ್ಧವಾದ ಎರಡು ಆಚರಣೆಗಳಾಗಿದೆ. ಈ ಅವಧಿಯಲ್ಲಿ ದೇವಾಲಯವು ಹೆಚ್ಚಿನ ದಿನಗಳವರೆಗೆ ಭಕ್ತರಿಗೆ ತೆರೆದಿರುತ್ತದೆ. 41 ದಿನಗಳ ವಾರ್ಷಿಕ ಮಂಡಲ ಪೂಜೆಯು ನವೆಂಬರ್ 17ರಿಂದ ಆರಂಭವಾಗಿ, ಡಿಸೆಂಬರ್ 17ರಂದು ಮುಕ್ತಾಯವಾಗಿತ್ತು. ಮಕರ ವಿಳಕ್ಕು ಋತುವಿಗಾಗಿ ಡಿ.30ರಂದು ದೇವಾಲಯವನ್ನು ತೆರೆಯಲಾಗಿತ್ತು. ಶನಿವಾರ ಮಕರ ವಿಳಕ್ಕು ಶುಭ ಸಂದರ್ಭದಲ್ಲಿ ಅಪ್ಪಯ್ಯನ ಭಕ್ತರಿಗೆ ಮಕರ ಜ್ಯೋತಿಯ ದರ್ಶನವಾಯಿತು.
ಸಾಂಪ್ರದಾಯಿಕ ಕಪ್ಪು ವಸ್ತ್ರದ ಭಕ್ತ ಸಾಗರ: ದೇವರ ದರ್ಶನಕ್ಕಾಗಿ ಭಕ್ತರು ಸರತಿ ಸಾಲುಗಳಲ್ಲಿ ನಿಂತು ಭಾರಿ ನೂಕುನುಗ್ಗಲು ಮಾಡಿದರು. ಸಾಂಪ್ರದಾಯಿಕ ಕಪ್ಪು ವಸ್ತ್ರವನ್ನು ಧರಿಸಿದ್ದ ಭಕ್ತ ಸಾಗರವು ಇರುಮುಡಿಯನ್ನು ತಮ್ಮ ತಲೆಯ ಮೇಲೆ ಹೊತ್ತು ಸಾಗಿತು. ಬೆಳಗ್ಗೆಯಿಂದಲೇ ಭಕ್ತರು ದೇವಾಲಯದ ಆವರಣ, ಅರಣ್ಯದಲ್ಲಿನ ರಸ್ತೆ ಮಾರ್ಗಗಳು ಮತ್ತು ಶಿಬಿರಗಳಲ್ಲಿ ಅಯ್ಯಪ್ಪನ ಜಪ ಮಾಡುತ್ತಾ ತಾಳ್ಮೆಯಿಂದ ದರ್ಶನಕ್ಕಾಗಿ ಕಾಯುತ್ತಿದ್ದರು. ಸಂಜೆ ದೀಪಾರಾಧನೆ ನಂತರ ದೇವಾಲಯದ ದ್ವಾರಗಳನ್ನು ತೆರೆದಾಗ ದೇವರ ಕೀರ್ತನೆಗಳು ಮತ್ತು ಸ್ತೋತ್ರಗಳನ್ನು ಭಕ್ತರು ಮೊಳಗಿಸಿದರು.
ಮಕರ ಜ್ಯೋತಿ ಕಣ್ತುಂಬಿಕೊಂಡ ಭಕ್ತಗಣ: ಪಂದಳಂ ಅರಮನೆಯಿಂದ ತರಲಾದ ತಿರುವಾಭರಣವನ್ನು ಅಯ್ಯಪ್ಪ ದೇವರ ವಿಗ್ರಹಕ್ಕೆ ಅಲಂಕರಿಸಿದ ನಂತರ ದೀಪಾರಾಧನೆ ನೆರವೇರಿತು. ಅರಮನೆಯಿಂದ ಮೂರು ದಿನಗಳ ಹಿಂದೆ ಆರಂಭವಾದ ಅದ್ದೂರಿ ಮೆರವಣಿಗೆಯಲ್ಲಿ ಆಭರಣವನ್ನು ತರಲಾಯಿತು. ದೀಪಾರಾಧನೆಗೆ ಸ್ವಲ್ಪ ಹೊತ್ತಿನ ಮೊದಲು ಈ ಆಭರಣ ದೇವಸ್ಥಾನಕ್ಕೆ ತಲುಪಿದವು. ತಿರುವಾಭರಣ ಅಲಂಕಾರ ಮತ್ತು ದೀಪಾರಾಧನೆ ನಂತರದ ಕೆಲ ನಿಮಿಷಗಳಲ್ಲಿ ದೇವಾಲಯದ ಆವರಣದಿಂದ ಎಂಟು ಕಿಮೀ ದೂರದ ಪೊನ್ನಂಬಲಮೇಡು ಬೆಟ್ಟದಲ್ಲಿ ಮಕರ ಜ್ಯೋತಿಯ ದರ್ಶನವಾಗಿತು. ಜ್ಯೋತಿ ಕಣ್ತುಂಬಿಕೊಂಡ ಭಕ್ತರು ಶರಣಂ ಅಯ್ಯಪ್ಪ ಎಂಬ ಘೋಷಣೆಗಳನ್ನು ಮತ್ತಷ್ಟು ಜೋರಾಗಿ ಮೊಳಗಿಸಿದರು.
ಶಬರಿಮಲೆಗೆ ಸುಪ್ರೀಂ ನಿವೃತ್ತ ನ್ಯಾಯಮೂರ್ತಿ ಭೇಟಿ: ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಇಂದು ಮಲ್ಹೋತ್ರಾ ಶನಿವಾರ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರಿಗೆ ಅವಕಾಶ ನೀಡುವ ವಿಚಾರವಾಗಿ ಸುಪ್ರೀಂಕೋರ್ಟ್‌ನ ಐದು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಸದಸ್ಯರಲ್ಲಿ ನ್ಯಾ.ಇಂದು ಮಲ್ಹೋತ್ರಾ ಒಬ್ಬರಾಗಿದ್ದರು.
ಶಬರಿಮಲೆ ದೇವಸ್ಥಾನದ ಪ್ರವೇಶಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಇದೇ ವಿಚಾರವಾಗಿ 2018ರಲ್ಲಿ ಸುಪ್ರೀಂಕೋರ್ಟ್‌ನ ಐದು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ನಾಲ್ವರು ನ್ಯಾಯಮೂರ್ತಿಗಳು ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡುವ ಪರವಾಗಿ ಕುರಿತು ತೀರ್ಪು ನೀಡಿದ್ದರು. ಆದರೆ, ನ್ಯಾ.ಇಂದು ಮಲ್ಹೋತ್ರಾ ಮಾತ್ರ ಭಿನ್ನ ತೀರ್ಪು ನೀಡಿದ್ದರು. ಧಾರ್ಮಿಕ ಸಂಸ್ಥೆಗಳೇ ತಮ್ಮ ಸಂಪ್ರದಾಯಗಳನ್ನು ನಿರ್ಧರಿಸುವಂತೆ ಇರಬೇಕೆಂದು ಮಲ್ಹೋತ್ರಾ ಹೇಳಿದ್ದರು. ಇಂದು ಶಬರಿಮಲೆ ಭೇಟಿ ಕುರಿತು ಪ್ರಕ್ರಿಯಿಸಿದ ಅವರು, ತಮ್ಮ ಭೇಟಿಯ ಉದ್ದೇಶವು ಪ್ರಾರ್ಥನೆ ಮಾತ್ರವಾಗಿದೆ ಎಂದ ಹೇಳಿದರು.
ಇದನ್ನೂ ಓದಿ: ಶಬರಿಮಲೆಯಲ್ಲಿ ಮಂಡಲ ಪೂಜೆ ಸಂಪನ್ನ: 39 ದಿನಗಳಲ್ಲಿ 222 ಕೋಟಿ ರೂ ಕಾಣಿಕೆ ಸಂಗ್ರಹ