ವಾರ್ಧಾ(ಮಹಾರಾಷ್ಟ್ರ): ಹಿಂದಿಯನ್ನು ಪ್ರಚಾರ ಮಾಡುವಾಗ ಮಹಾತ್ಮ ಗಾಂಧಿಯವರು ಮಾತೃಭಾಷೆಯ ಬಳಕೆ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಯಾವುದೇ ಭಾಷೆಯನ್ನು ಯಾರ ಮೇಲೂ ಹೇರಬಾರದೆಂದು ಅವರು ನಂಬಿದ್ದರು ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದ್ದಾರೆ.
ಮಹಾರಾಷ್ಟ್ರದ ವಾರ್ಧಾ ಜಿಲ್ಲೆಯ ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ಹಿಂದಿ ವಿಶ್ವವಿದ್ಯಾನಿಲಯದಲ್ಲಿ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ, ವಿವಿ ಆವರಣದಲ್ಲಿ ಅಟಲ್ ಬಿಹಾರಿ ವಾಜಪೇಯಿ ಭವನ ಹಾಗೂ ಚಂದ್ರಶೇಖರ್ ಆಜಾದ್ ಹಾಸ್ಟೆಲ್ ಉದ್ಘಾಟಿಸಿ ಬಳಿಕ ವೆಂಕಯ್ಯ ನಾಯ್ಡು ಅವರು ಭಾಷಣ ಮಾಡಿದರು.
ಹೊಸ ಶಿಕ್ಷಣ ನೀತಿ ಮಹಾತ್ಮ ಗಾಂಧಿಯವರ ಬೋಧನೆಗಳನ್ನು ಅನುಸರಿಸುತ್ತದೆ. ಪ್ರಾಥಮಿಕ ಮತ್ತು ಮಧ್ಯಮ ಶಾಲಾ ಹಂತದಲ್ಲಿ ಮಾತೃಭಾಷೆಯ ಬಳಕೆಯನ್ನೂ ಇದು ಪ್ರಸ್ತಾಪಿಸುತ್ತದೆ.
ಹಿಂದಿ ಭಾಷಾಂತರದೊಂದಿಗೆ ಇತರ ಭಾರತೀಯ ಭಾಷೆಗಳ ಸಾಹಿತ್ಯವೂ ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಬೇಕು. ವಿಶ್ವವಿದ್ಯಾಲಯಗಳ ಭಾಷಾ ವಿಭಾಗಗಳು ಈ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.
ಭಾಷೆಯ ಸಭ್ಯತೆ, ಪದಗಳ ಬಳಕೆಯ ಶಿಸ್ತನ್ನು ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಬಳಸಿಕೊಳ್ಳೋಣ. ನಮ್ಮ ಬರಹಗಳಿಂದ ಸಮಾಜಕ್ಕೆ ಒಳಿತಾಗಬೇಕು. ನಾಗರಿಕ ಸಮಾಜದಿಂದ ತನ್ನ ಭಾಷೆ ಸೌಮ್ಯ, ಸುಸಂಸ್ಕೃತ ಹಾಗೂ ಸೃಜನಶೀಲತೆಯನ್ನು ನಿರೀಕ್ಷಿಸುತ್ತದೆ. ವಿಶ್ವವಿದ್ಯಾನಿಲಯದ ಸಂಸ್ಕಾರಗಳು, ಸಾಹಿತ್ಯ ಬರಹಗಳು, ಸುಸಂಸ್ಕೃತ ಸಂಭಾಷಣೆಯನ್ನು ಮೈಗೂಡಿಸಿಕೊಳ್ಳಬೇಕೇ ಹೊರತು ಸಂಘರ್ಷವಲ್ಲ ಎಂದು ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಸುದೀರ್ಘ ಚರ್ಚೆಯ ಬಳಿಕ ಸಂವಿಧಾನ ಸಭೆಯು ಹಿಂದಿಯನ್ನು ಅಧಿಕೃತ ಭಾಷೆಯಾಗಿ ಅಂಗೀಕರಿಸಿತು. 8ನೇ ಶೆಡ್ಯೂಲ್‌ನಲ್ಲಿ ಇತರ ಭಾರತೀಯ ಭಾಷೆಗಳಿಗೆ ಸಾಂವಿಧಾನಿಕ ಸ್ಥಾನಮಾನವನ್ನು ನೀಡಲಾಗಿದೆ. ದೇಶದಲ್ಲಿ ಭಾಷಾ ವೈವಿಧ್ಯತೆ ಹೊಂದಿರುವ ನಾವು ಅದೃಷ್ಟವಂತರು.
ನಮ್ಮ ಭಾಷಾ ವೈವಿಧ್ಯತೆಯು ನಮ್ಮ ಶಕ್ತಿಯಾಗಿದೆ. ನಮ್ಮ ಭಾಷೆಗಳು ನಮ್ಮ ಸಾಂಸ್ಕೃತಿಕ ಏಕತೆಯ ಸಂಕೇತವಾಗಿವೆ. ಭಾರತೀಯ ಭಾಷೆಗಳು ಭವ್ಯ ಇತಿಹಾಸ ಮತ್ತು ಶ್ರೀಮಂತ ಸಾಹಿತ್ಯ ಹೊಂದಿವೆ ಎಂದರು.
ವಾರ್ಧಾದಲ್ಲಿರುವ ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯವು ಹಿಂದಿ ಮಾಧ್ಯಮದಲ್ಲಿ ಫ್ರೆಂಚ್, ಸ್ಪ್ಯಾನಿಷ್, ಚೈನೀಸ್, ಜಪಾನೀಸ್ ಮುಂತಾದ ವಿದೇಶಿ ಭಾಷೆಗಳನ್ನು ಕಲಿಸುತ್ತದೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ನಾಯ್ಡು, ಈ ಸೌಲಭ್ಯವನ್ನು ಇತರೆ ಭಾರತೀಯ ಭಾಷೆಗಳಿಗೂ ವಿಸ್ತರಿಸಿ ಹಿಂದಿ ವಿದ್ಯಾರ್ಥಿಗಳು ಇತರ ಭಾರತೀಯ ಭಾಷೆಗಳನ್ನು ಕಲಿಯುವಂತೆಯೂ ಕರೆ ನೀಡಿದರು.
ಇದನ್ನೂ ಓದಿ: ಕೋವಿಡ್ 20 ಸಾವಿರದ ಗಡಿ ದಾಟಿದರೆ ಮುಂಬೈನಲ್ಲಿ ಲಾಕ್ಡೌನ್ ಜಾರಿ: ಮೇಯರ್