ಮುಂಬೈ (ಮಹಾರಾಷ್ಟ್ರ): ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ಮಹಾರಾಷ್ಟ್ರ 'ಮಹಾ ವಿಕಾಸ ಆಘಾಡಿ' ಸರ್ಕಾರಕ್ಕೆ 'ಶಿವಸೇವಕ' ಏಕನಾಥ ಶಿಂಧೆ ಶಾಕ್ ಕೊಟ್ಟಿದ್ದು, ಸರ್ಕಾರದ ಬುಡವೇ ಅಲುಗಾಡುವಂತಾಗಿದೆ. ಶಿವಸೇನೆಯ ಹಿರಿಯ ನಾಯಕ, ಸಚಿವರಾದ ಏಕನಾಥ ಸುಮಾರು 21 ಶಾಸಕರೊಂದಿಗೆ ಬಿಜೆಪಿ ಆಡಳಿತವಿರುವ ಗುಜರಾತ್ನ ಮೆರಿಡಿಯನ್ ಹೋಟೆಲ್ಗೆ ಶಿಫ್ಟ್ ಆಗಿದ್ದಾರೆ. ಇದರ ನಡುವೆ ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಶಿಂಧೆ ಅವರನ್ನು ವಜಾಗೊಳಿಸಲಾಗಿದೆ.
ಕಳೆದ ಎರಡೂವರೆ ವರ್ಷದಲ್ಲಿ ಮಹಾವಿಕಾಸ ಆಘಾಡಿ ಸರ್ಕಾರದಲ್ಲಿ ಸಣ್ಣಪುಟ್ಟ ಗದ್ದಲ ಮತ್ತು ವದಂತಿಗಳು ಕೇಳಿ ಬರುತ್ತಲೇ ಇದ್ದವು. ಆದರೆ, ಈ ಬಾರಿ ಐವರು ಸಚಿವರು, ಒಬ್ಬ ಪಕ್ಷೇತರ ಸೇರಿ ಅಂದಾಜು 21 ಶಾಸಕರು ಸಂಪರ್ಕಕ್ಕೆ ಸಿಗದಂತೆ ಆಗಿದ್ದು, ಸರ್ಕಾರಕ್ಕೆ ಕುತ್ತು ಎದುರಾಗಿದೆ.
ಅಚ್ಚರಿ ಎಂದರೆ, ಈ ಬೆಳವಣಿಗೆಗೆ ಕಾರಣವಾಗಿರುವುದು ವಿಧಾನ ಪರಿಷತ್ತಿನ 10 ಸ್ಥಾನಗಳ ಚುನಾವಣಾ ಫಲಿತಾಂಶ. ಆಡಳಿತಾರೂಢ ಮೈತ್ರಿಕೂಟ 10ರ ಪೈಕಿ 6 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, 5 ಅಭ್ಯರ್ಥಿಗಳು ಮಾತ್ರ ಜಯಗಳಿಸಿದ್ದಾರೆ. ವಿರೋಧ ಪಕ್ಷದಲ್ಲಿರುವ ಬಿಜೆಪಿ ತಾನು ಸ್ಪರ್ಧಿಸಿದ್ದ ಎಲ್ಲ 5 ಸ್ಥಾನಗಳಲ್ಲೂ ಗೆಲುವು ಸಾಧಿಸಿದೆ. ನಂತರ ನಡೆದ ಬೆಳವಣಿಗೆಯಲ್ಲಿ ಏಕನಾಥ ಶಿಂಧೆ ಶಾಸಕರನ್ನು ಕಟ್ಟಿಕೊಂಡು ಗುಜರಾತ್ಗೆ ಹಾರಿದ್ದಾರೆ.
1. 'ಅಧಿಕಾರಕ್ಕಾಗಿ ಮೋಸ ಮಾಡಲ್ಲ': ಮಹಾರಾಷ್ಟ್ರ ಸರ್ಕಾರ ಮತ್ತು ಶಿವಸೇನೆಯ ಸಂಪರ್ಕಕ್ಕೆ ಸಿಗದೇ ಹೋಗಿರುವ ಏಕನಾಥ ಶಿಂಧೆ ಇಂದು ಮಧ್ಯಾಹ್ನ ನಿಗೂಢ ರೀತಿಯ ಟ್ವೀಟ್ ಮಾಡಿದ್ದಾರೆ. 'ನಾವು ಬಾಳಾಸಾಹೇಬರ ಕಟ್ಟಾ ಶಿವಸೈನಿಕರು. ಬಾಳಾಸಾಹೇಬರು ನಮಗೆ ಹಿಂದುತ್ವವನ್ನು ಕಲಿಸಿದ್ದಾರೆ. ಅಧಿಕಾರಕ್ಕಾಗಿ ನಾವು ಬಾಳಾಸಾಹೇಬ್ ಆಲೋಚನೆಗಳು ಮತ್ತು ಆನಂದ್ ದಿಘೆ ಸಾಹೇಬ್ ಬೋಧನೆಗಳಿಗೆ ಎಂದಿಗೂ ಮೋಸ ಮಾಡಿಲ್ಲ ಮತ್ತು ಮಾಡುವುದಿಲ್ಲ' ಎಂದು ಹೇಳಿದ್ದಾರೆ.
2. 'ಸಿಎಂ ಆಕಾಂಕ್ಷಿ ಎಂದು ಗೊತ್ತಿರಲಿಲ್ಲ': ರಾಜಕೀಯ ಬೆಳವಣಿಗೆಗಳ ಬಗ್ಗೆ ಎನ್ಸಿಪಿ ವರಿಷ್ಠ ಶರದ್ ಪವಾರ್ ಪ್ರತಿಕ್ರಿಯಿಸಿದ್ದು, 'ಶಿವಸೇನಾ ನಾಯಕ ಏಕನಾಥ ಶಿಂಧೆ ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದೂ ನಮಗೆ ತಿಳಿಸಿಲ್ಲ. ಮೇಲಾಗಿ ಶಿವಸೇನೆ ಬಳಿಯೇ ಮುಖ್ಯಮಂತ್ರಿ ಹುದ್ದೆ ಇದೆ. ಹೀಗಾಗಿ ಇದು ಆ ಪಕ್ಷದ ಆಂತರಿಕ ಸಮಸ್ಯೆ ಎಂದು ಸೂಕ್ಷ್ಮವಾಗಿ ಹೇಳಿದ್ಧಾರೆ.
ಅಲ್ಲದೇ, ಶೀಘ್ರವೇ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳುತ್ತೇವೆ. ಸಿಎಂ ಹುದ್ದೆ ಶಿವಸೇನೆ ಮತ್ತು ಡಿಸಿಎಂ ಹುದ್ದೆ ಎನ್ಸಿಪಿ ಬಳಿ ಇದೆ. ಏನಾದರೂ ಶಿವಸೇನೆ ಪಕ್ಷವೇ ತೀರ್ಮಾನ ತೆಗೆದುಕೊಳ್ಳಬೇಕು. ನಾವಂತೂ ಅವರೊಂದಿಗೆ ಇದ್ದೇವೆ. ಜೊತೆಗೆ ಚುನಾವಣೆಗಳಲ್ಲಿ ಅಡ್ಡಮತ ಇದೇ ಮೊದಲಲ್ಲ ಎಂದು ತಿಳಿಸಿದ್ದಾರೆ. ಇದೇ ವೇಳೆ ಬಿಜೆಪಿಯೊಂದಿಗೆ ಎನ್ಸಿಪಿ ಮೈತ್ರಿ ಸಾಧ್ಯವೇ? ಎಂಬ ಪ್ರಶ್ನೆಗೆ ನಕ್ಕು ಮುಂದೆ ಸಾಗಿದ್ದಾರೆ.
3. ನಮ್ಮ ಶಾಸಕರ ಕುರಿತ ಸುದ್ದಿ ಸುಳ್ಳು- ಕಾಂಗ್ರೆಸ್: ಈ ನಡುವೆ ಕಾಂಗ್ರೆಸ್ ಶಾಸಕರು ಕೂಡ ಪಕ್ಷದ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಸುದ್ದಿ ಹಾರಿದಾಡುತ್ತಿದೆ. ಆದರೆ, ಇದನ್ನು ಕಾಂಗ್ರೆಸ್ ತಳ್ಳಿ ಹಾಕಿದ್ದು, ಎಲ್ಲ ಶಾಸಕರು ರಾಜ್ಯಾಧ್ಯಕ್ಷ ನಾನಾ ಪಾಟೋಲೆ ಮತ್ತು ಶಾಸಕಾಂಗ ಪಕ್ಷದ ನಾಯಕ ಬಾಳಾಸಾಹೇಬ್ ಥೋರಟ್ ಅವರ ಸಂಪರ್ಕದಲ್ಲಿದ್ಧಾರೆ. ಅಲ್ಲದೇ, ಬಾಳಾಸಾಹೇಬ್ ಥೋರಟ್ ಅವರು ತಮ್ಮ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ದಿ ಕೂಡ ಆಧಾರರಹಿತ. ಅವರು ತಮ್ಮ ಮನೆಯಿಂದಲೇ ಎಲ್ಲ ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದಾರೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಹೇಳಿದೆ.
4. ತಾಂತ್ರಿಕವಾಗಿ ಸರ್ಕಾರಕ್ಕೆ ಅಲ್ಪಮತ: ಶಿವಸೇನೆ ಶಾಸಕರ ಬಂಡಾಯದ ಬೆನ್ನಲ್ಲೇ ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಲು ಆರಂಭಿಸಿದೆ. ಮಹಾರಾಷ್ಟ್ರದಲ್ಲಿ ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರ ಅಭ್ಯರ್ಥಿಗಳು ಹಾಗೂ ಸಣ್ಣ ಪಕ್ಷಗಳ ಬೆಂಬಲ ಗಳಿಸಿದೆ. ನಮ್ಮ ಮಾಹಿತಿ ಪ್ರಕಾರ ಏಕನಾಥ ಶಿಂಧೆ ಅವರೊಂದಿಗೆ 35 ಶಾಸಕರು ಹೋಗಿದ್ಧಾರೆ. ಇದರ ಅರ್ಥ ಸರ್ಕಾರ ಈಗಾಗಲೇ ತಾಂತ್ರಿಕವಾಗಿ ಅಲ್ಪಮತಕ್ಕೆ ಕುಸಿದಿದೆ. ಆದರೆ, ಪ್ರಾಯೋಗಿಕವಾಗಿಯೂ ಸರ್ಕಾರ ಅಲ್ಪಮತಕ್ಕೆ ಕುಸಿಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಚಂದ್ರಕಾಂತ ಪಾಟೀಲ್ ಹೇಳಿದ್ದಾರೆ.
ಇದೇ ವೇಳೆ ಸರ್ಕಾರ ರಚನೆ ಬಗ್ಗೆ ಬಿಜೆಪಿಯಿಂದಾಗಲಿ ಅಥವಾ ಏಕನಾಥ ಶಿಂಧೆ ಅವರಿಂದಾಗಲಿ ಇದುವರೆಗೆ ಯಾವುದೇ ಪ್ರಸ್ತಾಪವಾಗಿಲ್ಲ. ಆದರೂ, ರಾಜಕೀಯದಲ್ಲಿ ಯಾವುದೇ ಸಮಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಚಂದ್ರಕಾಂತ ಪಾಟೀಲ್ ಬಾಂಬ್ ಸಿಡಿಸಿದರು. ಜೊತೆಗೆ ಸರ್ಕಾರದ ವಿರುದ್ಧ ಅವಿಶ್ವಾಸ ಮತಯಾಚನೆಗೆ ನಾವು ಬೇಡಿಕೆ ಇಡುವ ಸಂದರ್ಭ ಇನ್ನೂ ಬಂದಿಲ್ಲ. ಜು.18ರಿಂದ ಅಧಿವೇಶನ ಆರಂಭವಾಗಲಿದೆ. ಆ ನಂತರ ಅದರ ನೋಡೋಣ ಎಂದು ಸೂಚ್ಯವಾಗಿ ಹೇಳಿದರು.
5. ಗುಜರಾತ್ಗೆ ಶಿವಸೇನೆ ಮುಖಂಡರು: ಈ ಎಲ್ಲ ಬೆಳವಣಿಗೆಗಳ ಮಧ್ಯೆ ಶಿವಸೇನೆ ನಾಯಕರು ಗುಜರಾತ್ ತಲುಪಿದ್ಧಾರೆ. ಬಂಡಾಯ ನಾಯಕ ಏಕನಾಥ ಶಿಂಧೆ ಮತ್ತು ಶಾಸಕರು ತಂಗಿದ್ದಾರೆ ಎನ್ನಲಾದ ಸೂರತ್ನ ಮೆರಿಡಿಯನ್ ಹೋಟೆಲ್ಗೆ ಶಿವಸೇನೆಯ ಮಿಲಿಂದ್ ನಾರ್ವೇಕರ್ ಮತ್ತು ರವಿ ಪಾಠಕ್ ಬಂದಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಲಾಭ ತರುತ್ತಾ ಏಕನಾಥ್ ಶಿಂದೆ ಬಂಡಾಯ? ಮ್ಯಾಜಿಕ್ ನಂಬರ್ಗೆ ಇನ್ನೆಷ್ಟು ದೂರ..?