ಮುಂಬೈ: ಕೋವಿಡ್ -19 ರೋಗಿಗಳು ಆಮ್ಲಜನಕ ಕೊರತೆಯಿಂದಾಗಿ ತತ್ತರಿಸಿದ್ದಾರೆ. ಹೀಗಾಗಿ ಜನರಿಗೆ ಉಚಿತವಾಗಿ ಶಹನಾವಾಜ್ ಶೇಖ್ ಎಂಬ ಯುವಕ ಆರಂಭಿಸಿರುವ ಕ್ರಮ ಮುಂಬೈನ ಅನೇಕ ಜನರಿಗೆ ಜೀವಸೆಲೆಯಾಗಿದೆ. ಕೇವಲ ಒಂದು ಫೋನ್ ಕರೆ ಮಾಡಿದರೆ ಸಾಕು ಶೇಖ್ ರೋಗಿಗಳಿಗೆ ಉಚಿತವಾಗಿ ಆಕ್ಸಿಜನ್ ತಲುಪಿಸುತ್ತಾರೆ.
ಕಳೆದ ವರ್ಷದಿಂದ ಇಲ್ಲಿವರೆಗೆ ಸುಮಾರು 5,500 ನಿರ್ಗತಿಕ ರೋಗಿಗಳ ಜೀವ ಉಳಿಸಿದ್ದಾರೆ ಶೇಖ್. ಪ್ರತಿದಿನ, ಸಹಾಯಕ್ಕಾಗಿ ಸುಮಾರು 500 ಜನರು ಅವರಿಗೆ ಕಾಲ್ ಮಾಡುತ್ತಾರೆ. ಕೋವಿಡ್ ಸೋಂಕಿತರಿಗೆ ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡುವ ಉದ್ದೇಶಕ್ಕಾಗಿ ಹಣವನ್ನು ಸಂಗ್ರಹಿಸುವ ಸಲುವಾಗಿ ಅವರು ಕಳೆದ ವರ್ಷ ತಮ್ಮ ಕಾರನ್ನೇ 22 ಲಕ್ಷ ರೂ.ಗಳಿಗೆ ಮಾರಾಟ ಮಾಡಿದ್ದಾರೆ. ಶೇಖ್ ಅವರ ಧೈರ್ಯ ಮತ್ತು ಸಾಮಾಜಿಕ ಕಾರ್ಯ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಶಹನಾವಾಜ್ ಅವರ ಗೆಳೆಯನ ಸಹೋದರಿ ಆಮ್ಲಜನಕ ಸಿಗದೇ ಸಾವನ್ನಪ್ಪಿದರು. ಈ ಘಟನೆಯಿಂದ ಬೇಸರಗೊಂಡ ಶೇಖ್, ತನ್ನ ಕಾರನ್ನೇ ಮಾರಾಟ ಮಾಡಿ 160 ಆಮ್ಲಜನಕ ಸಿಲಿಂಡರ್ ಖರೀದಿಸಿ ಆ ಮೂಲಕ ಜನರ ಜೀವ ಉಳಿಸುತ್ತಿದ್ದಾರೆ.
ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ಅಗತ್ಯಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಶಹನವಾಜ್ ಶೇಖ್ 'ಈಟಿವಿ ಭಾರತ'ಕ್ಕೆ ತಿಳಿಸಿದರು. ಕೋವಿಡ್ -19 ಈ ವರ್ಷ ಸೂಪರ್-ಸ್ಪ್ರೆಡ್ರ್ ಆಗಿ ಮಾರ್ಪಟ್ಟಿದ್ದರೂ, ಅದನ್ನು ನಿಭಾಯಿಸಲು ಸರ್ಕಾರ ಯಾವುದೇ ಉತ್ತಮ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.