ಪಾಲ್ಘರ್ (ಮಹಾರಾಷ್ಟ್ರ): ತನ್ನೊಂದಿಗೆ ಸಹಜೀವನ (ಲಿವ್ ಇನ್) ನಡೆಸುತ್ತಿದ್ದ ಮಹಿಳೆ ಅತ್ಯಾಚಾರ ಪ್ರಕರಣ ದಾಖಲಿಸಿದ ಕಾರಣಕ್ಕೆ ಆಕೆಯನ್ನು ವ್ಯಕ್ತಿಯೊಬ್ಬ ಕೊಲೆ ಮಾಡಿ, ಶವ ಎಸೆದಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಂಗಳವಾರ 43 ವರ್ಷದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಸಾಯಿ ಪ್ರದೇಶದ ನಿವಾಸಿ ಬಂಧಿತ ಆರೋಪಿಯಾಗಿದ್ದು, ಆಗಸ್ಟ್ 9ರಿಂದ 12ರ ನಡುವೆ ತನ್ನ 28 ವರ್ಷದ ಸಂಗಾತಿಯನ್ನು ಕೊಲೆ ಮಾಡಿದ್ದಾನೆ. ಆರೋಪಿ ಶವವನ್ನು ನೆರೆ ರಾಜ್ಯ ಗುಜರಾತ್‌ನ ವಾಪಿ ಪಟ್ಟಣ ಸಮೀಪ ವಿಲೇವಾರಿ ಮಾಡಿರುವ ಮಾಹಿತಿ ಲಭ್ಯವಾಗಿದೆ. ಸಂತ್ರಸ್ತೆಯ ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ವಸಾಯಿ ಸಹಾಯಕ ಪೊಲೀಸ್ ಆಯುಕ್ತೆ ಪದ್ಮಜಾ ಬಡೆ ಮಾಹಿತಿ ನೀಡಿದರು.
ಇದನ್ನೂ ಓದಿ: ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮಹಿಳೆಯನ್ನ 13 ತುಂಡುಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಬೇಯಿಸಿದ ಕ್ರೂರಿ
ಸಂತ್ರಸ್ತೆ ನಾಪತ್ತೆಯಾದ ಬಗ್ಗೆ ಆಕೆಯ ಕುಟುಂಬ ಆಗಸ್ಟ್ 14ರಂದು ನೈಗಾಂವ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ದೂರಿನ ಮೇಲೆ ತನಿಖೆ ಆರಂಭಿಸಿದಾಗ ಆಕೆಯೊಂದಿಗೆ ಸಹಜೀವನದಲ್ಲಿದ್ದ ಆರೋಪಿಯ ಸುಳಿವು ಸಿಕ್ಕಿತ್ತು. ಸಂತ್ರಸ್ತೆ ಅತ್ಯಾಚಾರದ ದೂರು ದಾಖಲಿಸಿದ್ದರಿಂದ ಆರೋಪಿ ಕೋಪಗೊಂಡಿದ್ದ. ದೂರು ಹಿಂಪಡೆಯುವಂತೆ ಒತ್ತಡ ಹೇರಿದ್ದ. ಆದರೆ, ಇದನ್ನು ನಿರಾಕರಿಸಿದ್ದ ಕಾರಣ ಆಕೆಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಅವರು ವಿವರಿಸಿದರು.
ನೈಗಾಂವ್ ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಮತ್ತು 201 (ಸಾಕ್ಷ್ಯ ನಾಶ) ಅಡಿಯಲ್ಲಿ ಸೋಮವಾರ ಎಫ್‌ಐಆರ್ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ. ಅಲ್ಲದೇ, ಆತ್ಮಹತ್ಯೆಗೆ ಪ್ರಚೋದನೆಯ ಆರೋಪದ ಮೇಲೆ ಮೀರಾ ಭಾಯಂದರ್-ವಸಾಯಿ ವಿರಾರ್ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಬಾಲಕನಿಗೆ ಸಿಗರೇಟ್ನಿಂದ ಸುಟ್ಟ ಆರೋಪಿ (ಪ್ರತ್ಯೇಕ ಪ್ರಕರಣ): ಮತ್ತೊಂದೆಡೆ, ನಾಗ್ಪುರದಲ್ಲಿ ಮಹಿಳೆಯೊಂದಿಗೆ ಸಹಜೀವನ ನಡೆಸುತ್ತಿದ್ದ ಆರೋಪಿಯೋರ್ವ ಆಕೆಯ ನಾಲ್ಕು ವರ್ಷದ ಮಗನಿಗೆ ಸಿಗರೇಟ್ನಿಂದ ಸುಟ್ಟು ಗಾಯಗೊಳಿಸಿರುವ ಘಟನೆ ವರದಿಯಾಗಿದೆ. ಸಂಕೇತ್ ಉತ್ತರ್ವರ್ ಎಂಬಾತನ ವಿರುದ್ಧ ಬಾಲಕನ ಅಜ್ಜಿ ವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಹಿಳೆಯ ಪತ್ನಿ ಆತ್ಮಹತ್ಯೆ ಮಾಡಿಕೊಂಡ ನಂತರ ಆಕೆ ಸಂಕೇತ್ ಜೊತೆಗೆ ಸಹಜೀವನ ನಡೆಸುತ್ತಿದ್ದಳು. ಆಕೆಯ ಮಗು ಸಹ ಅವರೊಂದಿಗೆ ವಾಸವಾಗಿದ್ದ. ಆದರೆ, ಬಾಲಕನಿಗೆ ಆರೋಪಿ ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ ಕೊಡುತ್ತಿದ್ದ. ಇದನ್ನು ಗಮನಿಸಿ ಕೂಡ ಮಗುವಿನ ತಾಯಿ ಸುಮ್ಮನೆ ಇರುತ್ತಿದ್ದರು ಎಂದು ಅಜ್ಜಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಈ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ: ಲಿವ್ ಇನ್ ಸಂಗಾತಿಗೆ ಬೆಂಕಿ ಹಚ್ಚಿದ ದುರುಳ.. ಚಿಕಿತ್ಸೆ ಫಲಿಸದೆ ಮಹಿಳೆ ಸಾವು