ಪುಣೆ(ಮಹಾರಾಷ್ಟ್ರ): ಕೊರೊನಾ ಬೆನ್ನಲ್ಲೇ ಇದೀಗ ಪಕ್ಕದ ರಾಜ್ಯಗಳಾಗಿರುವ ಮಹಾರಾಷ್ಟ್ರ ಹಾಗೂ ಕೇರಳದಲ್ಲಿ ಝಿಕಾ ವೈರಸ್ ಹಾವಳಿ ಜೋರಾಗಿದ್ದು, ಇದರಿಂದ ಜನರ ರಕ್ಷಣೆ ಮಾಡಲು ಸರ್ಕಾರ ವಿಭಿನ್ನ ಕ್ರಮ ಕೈಗೊಳ್ಳುತ್ತಿದೆ. ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ಮೊದಲ ಝಿಕಾ ವೈರಸ್ ಕಾಣಿಸಿಕೊಂಡಿದ್ದು, ಅಲ್ಲಿನ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.
ಪುಣೆಯ ಪುರಂದರ್ ತಾಲೂಕಿನ ಬೆಲ್ಸರ್ ಗ್ರಾಮದಲ್ಲಿ ಝಿಕಾ ವೈರಸ್ ಪತ್ತೆಯಾಗಿದ್ದು, ಹೀಗಾಗಿ ಅಲ್ಲಿನ ಗ್ರಾಮ ಪಂಚಾಯ್ತಿ ಮುಂಜಾಗ್ರತಾ ಕ್ರಮವಾಗಿ ಕಾಂಡೋಮ್ ವಿತರಣೆ ಮಾಡುತ್ತಿದೆ. ಪುರುಷರ ವೀರ್ಯದಲ್ಲಿ ಝಿಕಾ ವೈರಸ್ ಕಂಡು ಬಂದಿರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಜೊತೆಗೆ ಮುಂದಿನ ನಾಲ್ಕು ತಿಂಗಳು ಮಹಿಳೆಯರು ಗರ್ಭಧಾರಣೆ ತಪ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ. ಸಾಧ್ಯವಾದರೆ ಮುಂದಿನ 4 ತಿಂಗಳ ಕಾಲ ದೈಹಿಕ ಸಂಪರ್ಕದಿಂದ ದೂರವಿರುವಂತೆ ಸೂಚನೆ ನೀಡಲಾಗಿದ್ದು, ಕಾಂಡೋಮ್ ಬಳಕೆ ಮಾಡುವಂತೆ ವೈದ್ಯಕೀಯ ಇಲಾಖೆ ತಿಳಿಸಿದೆ.
ಪುರುಷರ ವೀರ್ಯದಲ್ಲಿ ಝಿಕಾ ವೈರಸ್
ಮೂರುವರೆ ಸಾವಿರ ಜನಸಂಖ್ಯೆ ಹೊಂದಿರುವ ಬೆಲ್ಸರ್ ಗ್ರಾಮದಲ್ಲಿ ಜುಲೈ ತಿಂಗಳಿಂದಲೂ ಜ್ವರ ಸೇರಿದಂತೆ ಅನೇಕ ರೋಗ ಕಂಡು ಬರುತ್ತಿವೆ. ಜುಲೈ 16ರಂದು ಐದು ರೋಗಿಗಳ ಮಾದರಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಪರಿಕ್ಷೆ ಮಾಡಲು ರವಾನೆ ಮಾಡಲಾಗಿತ್ತು.
ಅದರಲ್ಲಿ ಮೂವರಿಗೆ ಚಿಕೂನ್ ಗುನ್ಯಾ ಇರುವುದು ಪತ್ತೆಯಾಗಿದೆ. ಇದಾದ ಬಳಿಕ ಈ ಗ್ರಾಮಕ್ಕೆ ಭೇಟಿ ನೀಡಿದ ವೈದ್ಯರ ತಂಡ 41 ಶಂಕಿತ ರೋಗಿಗಳ ಮಾದರಿ ತೆಗೆದುಕೊಂಡು ಹೋಗಿದ್ದು, ಇದರಲ್ಲಿ 50 ವರ್ಷದ ಮಹಿಳೆಗೆ ಝಿಕಾ ವೈರಸ್ ಇರುವುದು ಪತ್ತೆಯಾಗಿದೆ. ಪ್ರಮುಖವಾಗಿ ಝಿಕಾ ವೈರಸ್ ಪುರುಷರ ವೀರ್ಯಾಣುದಲ್ಲಿರುವುದು ಕಂಡು ಬಂದಿರುವ ಕಾರಣ ಅಲ್ಲಿನ ಇಲಾಖೆ ಮಹತ್ವದ ಸೂಚನೆ ನೀಡಿದೆ.
ಝಿಕಾ ಎಂದರೇನು? ರೋಗ ಲಕ್ಷಣಗಳಾವುವು?
ಝಿಕಾ ವೈರಸ್, ಈಡಿಸ್ ಈಜಿಪ್ಟಿ ಸೊಳ್ಳೆ (Aedes Aegypti Mosquito)ಯ ಕಡಿತದ ಮೂಲಕ ಹರಡುತ್ತದೆ. ಈ ವೈರಸ್ ದೇಹಕ್ಕೆ ಹೊಕ್ಕಿದರೂ ಕೆಲವರಲ್ಲಿ ರೋಗ ಲಕ್ಷಣಗಳು ಕಂಡು ಬರುವುದಿಲ್ಲ ಎಂದು ಸಂಶೋಧನೆಯೊಂದು ತಿಳಿಸಿದೆ. ಒಂದು ವೇಳೆ ವೈರಸ್ ಕಂಡು ಬಂದರೆ ಜ್ವರ, ದೇಹದ ನೋವು ಮತ್ತು ಕಣ್ಣು ಕೆಂಪಾಗುವುದು(conjunctivitis) ಇಂತಹ ಲಕ್ಷಣಗಳು ಕಂಡು ಬರುತ್ತದೆ. ಈ ವೈರಸ್ ಗರ್ಭಿಣಿಯರ ಮೇಲೆ ಪ್ರಭಾವ ಬೀರುವುದರಿಂದ ಹೆಚ್ಚು ಜಾಗರೂಕರಾಗಿರಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.