ಮುಂಬೈ(ಮಹಾರಾಷ್ಟ್ರ): ಜೂನ್ 30ರಿಂದಲೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕ್ಯಾಬಿನೆಟ್ನೊಂದಿಗೆ ಕೆಲಸ ನಿರ್ವಹಿಸುತ್ತಿರುವ ಮಹಾರಾಷ್ಟ್ರದಲ್ಲಿ ನಾಳೆ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ದಟ್ಟವಾಗಿದೆ. ಬೆಳಗ್ಗೆ 11 ಗಂಟೆಗೆ ಮಹಾರಾಷ್ಟ್ರದ ರಾಜ ಭವನದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸಚಿವ ಸಂಪುಟ ವಿಸ್ತರಣೆಯಾಲಿದೆ ಎಂದು ವರದಿಯಾಗಿದೆ.
ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿರುವ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರಿಗೆ ಶಿಂದೆ ಕ್ಯಾಬಿನೆಟ್ನಲ್ಲಿ ಗೃಹ ಖಾತೆ ಸಿಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಮಹಾವಿಕಾಸ್ ಅಘಾಡಿ ಸರ್ಕಾರ ಪತನಗೊಳ್ಳುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಶಿವಸೇನೆಯ ಏಕನಾಥ್ ಶಿಂದೆ ಕಳೆದ ಜೂನ್ 30ರಂದು ಮುಖ್ಯಮಂತ್ರಿಯಾಗಿ ಹಾಗೂ ಬಿಜೆಪಿಯ ದೇವೇಂದ್ರ ಫಡ್ನವೀಸ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದರು. ಇಲ್ಲಿಯವರೆಗೆ ಯಾವುದೇ ಶಾಸಕರು ಇವರು ಸಚಿವ ಸಂಪುಟದಲ್ಲಿ ಅವಕಾಶ ಗಿಟ್ಟಿಸಿಕೊಂಡಿಲ್ಲ. ಕಳೆದ ಮೂರು ದಿನಗಳ ಹಿಂದೆ ದೆಹಲಿ ಪ್ರವಾಸ ಕೈಗೊಂಡಿದ್ದ ಉಪ ಮುಖ್ಯಮಂತ್ರಿ ಫಢ್ನವೀಸ್, ಸಚಿವ ಸಂಪುಟ ಅಭ್ಯರ್ಥಿಗಳ ಫೈನಲ್ ಪಟ್ಟಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗ್ತಿದ್ದು, ಇದರ ಬೆನ್ನಲ್ಲೇ ನಾಳೆ ಸಚಿವ ಸಂಪುಟ ವಿಸ್ತರಣೆ ಕಾರ್ಯಕ್ರಮ ನಡೆಯಲಿದೆ.
ಇದನ್ನೂ ಓದಿ: 'ಮಹಾ' ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ, ಡಿಸಿಎಂ ಆಗಿ ದೇವೇಂದ್ರ ಫಡ್ನವೀಸ್ ಪ್ರಮಾಣ
ಪ್ರಾಥಮಿಕ ಮಾಹಿತಿ ಪ್ರಕಾರ ಬಿಜೆಪಿಯ ಹಿರಿಯ ಮುಖಂಡರಾದ ಸುಧೀರ್ ಮುಂಗಂತಿವಾರ್, ಚಂದ್ರಕಾಂತ್ ಪಾಟೀಲ್, ಗಿರೀಶ್ ಮಹಾಜನ್ ಸಚಿವರಾಗುವ ಸಾಧ್ಯತೆ ದಟ್ಟವಾಗಿದೆ. ಮುಖ್ಯವಾಗಿ 12 ಶಾಸಕರು ಶಿಂದೆ ಕ್ಯಾಬಿನೆಟ್ ಸೇರಿಕೊಳ್ಳಲಿದ್ದಾರೆ. ಶಿಂಧೆ ಬಣದಿಂದ ಗುಲಾಬ್ ರಘುನಾಥ್ ಪಾಟೀಲ್, ಸದಾ ಸರ್ವಂಕರ್ ಮತ್ತು ದೀಪಕ್ ವಸಂತ ಕೇಸರಕರ್ ನಾಳೆ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ದಟ್ಟವಾಗಿದೆ.