ಚಂದ್ರಾಪುರ: ಅತಿವೃಷ್ಟಿ, ಅನಾವೃಷ್ಟಿಯಿಂದಾಗಿ ಸಾಲದ ಶೂಲದಲ್ಲಿ ಸಿಲುಕಿದ ರೈತರ ಆತ್ಮಹತ್ಯೆ ಪ್ರಕರಣಗಳು ದೇಶಾದ್ಯಂತ ದಾಖಲಾಗುತ್ತಿವೆ. ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯಲ್ಲಿ ಒಂದೇ ತಿಂಗಳಲ್ಲಿ 13 ರೈತರು ಪ್ರಾಣಾಹುತಿ ನೀಡಿದ್ದಾರೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ನಾನಾ ಕಾರಣಗಳಿಗೆ 73 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸರ್ಕಾರದ ದಾಖಲೆಗಳೇ ತಿಳಿಸಿವೆ.
2001 ರಿಂದ 2023 ರ 12 ವರ್ಷಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 1,148 ರೈತರು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ಇದರಲ್ಲಿ ಕಳೆದ 5 ವರ್ಷಗಳಲ್ಲಿ 446 ರೈತರು ಇದ್ದರೆ, ಈ ವರ್ಷದ 8 ತಿಂಗಳಲ್ಲೇ 73 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಡಳಿತದ ದಾಖಲೆಗಳಲ್ಲಿದೆ. ಇನ್ನೂ, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನು ಒಳಗೊಂಡ ಸಮಿತಿಯು ನಡೆಸಿದ 2001 ರಿಂದ 2022 ರ ನಡುವೆ ಆತ್ಮಹತ್ಯೆ ಪ್ರಕರಣಗಳ ಅಧ್ಯಯನದಲ್ಲಿ 745 ರೈತರು ಸರ್ಕಾರದ ಪರಿಹಾರಕ್ಕೆ ಅರ್ಹರಾಗಿದ್ದು, 329 ಮೃತ ಸಾಗುವಳಿದಾರರು ಅನರ್ಹರು ಎಂದು ಗುರುತಿಸಿದೆ.
ಸಮಿತಿಯು ಮೃತ ರೈತರ ಕುಟುಂಬಗಳಿಗೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿದ್ದು, 2022ರ ಡಿಸೆಂಬರ್‌ನಿಂದ 48 ಆತ್ಮಹತ್ಯೆ ಪ್ರಕರಣಗಳು ಬಾಕಿ ಉಳಿದಿವೆ. ಅವುಗಳ ವಿಚಾರಣೆ ನಡೆಯುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ 1 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ನೀಡಲು ವರದಿಯಲ್ಲಿ ಸೂಚಿಸಿದೆ.
ಪರಿಹಾರ ನಿಯಮ ಹೀಗಿದೆ: ರೈತರು ಆತ್ಮಹತ್ಯೆ ಮಾಡಿಕೊಂಡರೆ ಸರ್ಕಾರ ಕೆಲ ನಿಗದಿತ ಮಾನದಂಡಗಳ ಅನುಸಾರ ಪರಿಹಾರ ನೀಡುತ್ತದೆ. ಬೆಳೆ ನಷ್ಟ, ರಾಷ್ಟ್ರೀಕೃತ ಬ್ಯಾಂಕ್‌ಗಳು/ಸಹಕಾರಿ ಬ್ಯಾಂಕ್‌ಗಳು ಅಥವಾ ಮಾನ್ಯತೆ ಪಡೆದ ಲೇವಾದೇವಿದಾರರಿಂದ ಪಡೆದ ಸಾಲವನ್ನು ಮರುಪಾವತಿಸಲು ಆಗದೇ ಇರುವುದು, ಇದಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲಿ ಅಂತಹ ರೈತರ ಕುಟುಂಬ 1 ಲಕ್ಷ ರೂಪಾಯಿ ಪರಿಹಾರಕ್ಕೆ ಅರ್ಹವಾಗಿರುತ್ತದೆ. ಅದರಲ್ಲಿ 30 ಸಾವಿರ ರೂಪಾಯಿ ನೇರವಾಗಿ ಹಸ್ತಾಂತರಿಸಿ, ಉಳಿದ ಹಣವನ್ನು 2006ರಲ್ಲಿ ಹೊರಡಿಸಿದ ಸರ್ಕಾರದ ಆದೇಶದ ಪ್ರಕಾರ 5 ವರ್ಷಗಳವರೆಗೆ ಅವರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.
ಅತಿವೃಷ್ಟಿಯಿಂದಾಗಿ ಬೆಳೆ ಹಾನಿ: ಈ ವರ್ಷ ಜೂನ್-ಜುಲೈನಲ್ಲಿ ಅತಿವೃಷ್ಟಿ ಉಂಟಾಗಿ ಜಿಲ್ಲೆಯಲ್ಲಿ 64,379 ರೈತರ ಒಟ್ಟು 54,514.65 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಅದರಲ್ಲೂ ಗೊಂಡಪಿಪ್ರಿ ತಹಸಿಲ್ ಪ್ರದೇಶದಲ್ಲಿ 12,571 ಹೆಕ್ಟೇರ್ ಭೂಮಿಯಲ್ಲಿ ಅತಿ ಹೆಚ್ಚು ಬೆಳೆ ಹಾನಿ ಉಂಟಾಗಿದೆ. ಪ್ರವಾಹದಿಂದಾಗಿ ಒಟ್ಟು 852 ಗ್ರಾಮಗಳು ಹಾನಿಗೀಡಾಗಿವೆ ಎಂದು ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳೆ ಹಾನಿಗೆ 44.63 ಕೋಟಿ ರೂ.ಗಳ ಪರಿಹಾರದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 3,51,091 ರೈತರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ 1 ರೂಪಾಯಿ ಪ್ರೀಮಿಯಂ ಬೆಳೆ ಪರಿಹಾರ ವಿಮೆಯನ್ನು ಮಾಡಿಸಿದ್ದಾರೆ. ಅದರಲ್ಲಿ ಪಡೆದ 50,890 ರೈತರು ಇದ್ದರೆ, 3,00,201 ಸಾಲ ಪಡೆಯದ ರೈತರೂ ಇದ್ದಾರೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಇದನ್ನೂ ಓದಿ: 'ವಿಕ್ರಮ್ ಲ್ಯಾಂಡರ್ ಸ್ಪರ್ಶಿಸಿದ ಸ್ಥಳಕ್ಕೆ ಅಬ್ದುಲ್ ಕಲಾಂ ಹೆಸರು ಸೂಕ್ತ': 'ಶಿವಶಕ್ತಿ ಪಾಯಿಂಟ್'ಗೆ ಎಸ್‌ಪಿ ಸಂಸದ ವಿರೋಧ