ಮುಂಬೈ: ಅಫ್ಘಾನಿಸ್ತಾನದಿಂದ ಮಾದಕದ್ರವ್ಯ ಹೆರಾಯಿನ್ ಕಳ್ಳಸಾಗಾಣೆ ಮಾಡುತ್ತಿದ್ದ ಓರ್ವ ವ್ಯಕ್ತಿಯನ್ನು ಡಿಆರ್‌ಐ ಬಂಧಿಸಿದೆ. ಆರೋಪಿಯಿಂದ 879 ಕೋಟಿ ರೂ. ಮೌಲ್ಯದ ಸುಮಾರು 300 ಕೆ.ಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರಬ್ಜೋತ್ ಸಿಂಗ್ ಬಂಧಿತ ಆರೋಪಿ. ಈತ ರಾಯ್ಗಡ್ ಜಿಲ್ಲೆಯ ಜವಾಹರಲಾಲ್ ನೆಹರು ಪೋರ್ಟ್ (ಜೆಎನ್‌ಪಿಟಿ) ಜೊತೆ ಸಂಬಂಧ ಹೊಂದಿದ್ದು, ಅಫ್ಘಾನಿಸ್ತಾನದಿಂದ ಇರಾನ್ ಮೂಲಕ ಹೆರಾಯಿನ್ ಕಳ್ಳಸಾಗಣೆ ಮಾಡುತ್ತಿದ್ದ. ಆತನಿಂದ ವಶಕ್ಕೆ ಪಡೆಯಲಾದ ವಸ್ತುಗಳನ್ನು ಜಿಪ್ಸಮ್ ಕಲ್ಲು ಮತ್ತು ಟಾಲ್ಕಮ್ ಪೌಡರ್ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಆರೋಪಿ ಕಳೆದ ವರ್ಷದಿಂದ ಜೆಎನ್‌ಪಿಟಿ ಮೂಲಕ ಜಿಪ್ಸಮ್ ಕಲ್ಲು ಮತ್ತು ಟಾಲ್ಕಮ್ ಪೌಡರ್ ಅನ್ನು ಆಮದು ಮಾಡಿಕೊಳ್ಳುತ್ತಿದ್ದು, ಕಳೆದ ವರ್ಷ ಆಗಸ್ಟ್‌ನಲ್ಲಿ ಜೆಎನ್‌ಪಿಟಿಯಲ್ಲಿನ ಸರಕು ಕಂಟೇನರ್ ಮೂಲಕ ಅಫ್ಘಾನಿಸ್ತಾನದಿಂದ ಹೆರಾಯಿನ್ ಸಾಗಾಣೆ ಮಾಡುತ್ತಿದ್ದ. ಈ ವೇಳೆ ಮುಂಬೈ ಕಸ್ಟಮ್ಸ್ ಮತ್ತು ಡಿಆರ್‌ಐ ಸುಮಾರು 1,000 ಕೋಟಿ ರೂಪಾಯಿ ಮೌಲ್ಯದ 191 ಕೆಜಿ ಹೆರಾಯಿನ್ ಅನ್ನು ವಶಕ್ಕೆ ಪಡೆದಿದ್ದರು.