ಮುಂಬೈ (ಮಹಾರಾಷ್ಟ್ರ): ಇತ್ತ ಕರ್ನಾಟಕದಲ್ಲಿ ಮಳೆರಾಯನ ಆರ್ಭಟ ಜೋರಾಗಿದ್ದರೆ, ಮಹಾರಾಷ್ಟ್ರದಲ್ಲೂ ವರುಣ ಹಲವು ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಕಳೆದ 48 ಗಂಟೆಗಳಲ್ಲಿ ಮಹಾರಾಷ್ಟ್ರದಲ್ಲಿ ಭೂಕುಸಿತ ಸೇರಿದಂತೆ ಮಳೆ ಸಂಬಂಧಿತ ದುರ್ಘಟನೆಗಳಲ್ಲಿ 129 ಜನರು ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಾಯಗಢ ಜಿಲ್ಲೆಯ ಮಹಾಡ್ ತಹಸಿಲ್‌ನ ಗ್ರಾಮವೊಂದರಲ್ಲಿ ಗುರುವಾರ ಸಂಭವಿಸಿದ ಭೂಕುಸಿತದಲ್ಲಿ 38 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಹೆಚ್ಚು ಮಂದಿ ರಾಯಗಢ ಮತ್ತು ಮತ್ತು ಸತಾರಾ ಜಿಲ್ಲೆಗಳಲ್ಲಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.
ಮಹಾಡ್ ತಹಸಿಲ್‌ನ ತಲೈ ಗ್ರಾಮದ ಬಳಿ 27 ಮಂದಿ ಭೂಕುಸಿತವುಂಟಾಗಿದ್ದು, ಈವರೆಗೆ 36 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಎನ್ಡಿಆರ್ಎಫ್ ಮತ್ತು ಸ್ಥಳೀಯ ಅಧಿಕಾರಿಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶೂನ್ಯ ಬಂಡವಾಳದಲ್ಲಿ ವಿಷ ಮುಕ್ತ ಕೃಷಿ; 2 ಎಕರೆ ಜಾಗದಲ್ಲಿ ರೈತನಿಗೆ ಕೈತುಂಬಾ ಪ್ರತಿ'ಫಲ'
ಗುರುವಾರ ರಾತ್ರಿ ಸತಾರಾದ ಪಟಾನ್ ತಹಸಿಲ್‌ನ ಅಂಬೆಘರ್ ಮತ್ತು ಮಿರ್ಗಾಂವ್ ಗ್ರಾಮಗಳಲ್ಲಿ ಒಟ್ಟು ಎಂಟು ಮನೆಗಳ ಮೇಲೆ ಭೂಮಿ ಕುಸಿದಿದೆ ಎಂದು ಸತಾರಾ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಬನ್ಸಾಲ್ ತಿಳಿಸಿದ್ದಾರೆ. ಆದರೆ ಈವರೆಗೂ ಯಾವುದೇ ಸಾವು-ನೋವಿನ ವರದಿಯಾಗಿಲ್ಲ. ರತ್ನಗಿರಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ ನಂತರ 10 ಜನರು ಸಿಲುಕಿದ್ದು, ರಕ್ಷಣಾ ಕಾರ್ಯ ಮುಂದುವರೆಯುತ್ತಿದೆ.